ಯಾರಿಗೆ ಒಲಿಯಲಿದೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ?

oppo_0
oppo_0
Published on

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆಗೆ ಆ.29 ರಂದು ಚುನಾವಣೆ ನಿಗದಿಯಾಗಿದ್ದು 2 ಸ್ಥಾನಗಳು ಸಹ ಜೆಡಿಎಸ್‌ಗೆ ಒಲಿಯುವುದು ಬಹುತೇಕ ಖಚಿತವಾಗಿದೆ.

13 ಸದಸ್ಯ ಬಲವನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ 3 ಸ್ಥಾನ ಪಡೆದುಕೊಳ್ಳುವುದರ ಮೂಲಕ ಅತಂತ್ರವಾಗಿತ್ತು. ಜೆಡಿಎಸ್ ಹೆಚ್ಚು ಸ್ಥಾನವನ್ನು ಪಡೆದಿದ್ದು ಇನ್ನಿಲ್ಲದ ಕಸರತ್ತು ನಡೆಸಿದ್ದರೂ ಅಧಿಕಾರ ಪಡೆಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಯಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿಯ ಚಂದ್ರಮ್ಮ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ನ ಗಿರೀಶ್‌ಕುಮಾರ್ ಅಲಂಕರಿಸಿದ್ದರು.

ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಇದೀಗ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಚುನಾವಣೆ ನಿಗದಿಪಡಿಸಲಾಗಿದೆ. ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಮಹಿಳಾ ಸದಸ್ಯರು ಇಲ್ಲ. ಇನ್ನು ಪಪಂ ಅಧ್ಯಕ್ಷರಾಗಿದ್ದ ಬಿಜೆಪಿಯ 12ನೇ ವಾರ್ಡ್ ಸದಸ್ಯೆ ಚಂದ್ರಮ್ಮ ಇತ್ತೀಚೆಗೆ ನಿಧನರಾಗಿದ್ದಾರೆ. ಇತ್ತ 5ನೇ ವಾರ್ಡ್‌ನ ಬಿಜೆಪಿ ಸದಸ್ಯೆ ರೂಪಾ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಅಧ್ಯಕ್ಷ ಸ್ಥಾನ ಈ 2 ಪಕ್ಷಗಳಿಗೆ ವಂಚಿತವಾಗಿದೆ. ಹಾಗಾಗಿ ಈ ಸ್ಥಾನ ಈ ಬಾರಿ ಜೆಡಿಎಸ್‌ಗೆ ಒಲಿದು ಬಂದಿರುವುದು ಅದೃಷ್ಟವಾಗಿದೆ.

ಯಾರಿಗೆ ಸಿಗಲಿದೆ?
ಪ್ರಸ್ತುತ ಪಪಂನಲ್ಲಿ ಜೆಡಿಎಸ್ 6, ಕಾಂಗ್ರೆಸ್ 5 ಹಾಗೂ ಬಿಜೆಪಿಯ ಒಬ್ಬರು ಸೇರಿದಂತೆ ಒಟ್ಟು 12 ಸದಸ್ಯರಿದ್ದಾರೆ. ಜೆಡಿಎಸ್ 6 ಸದಸ್ಯರ ಜತೆಗೆ ಶಾಸಕರ ಮತವೂ ಇದೆ. ಕಳೆದ ಅವಧಿಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದರೂ ಪಪಂ ಗದ್ದುಗೆ ಹಿಡಿಯಲು ವಂಚಿತವಾದ ಜೆಡಿಎಸ್‌ಗೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಮೀಸಲು ಸ್ಥಾನಕ್ಕೆ ಸದಸ್ಯರು ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ತಾನಾಗಿಯೇ ಒಲಿದು ಬಂದಿದೆ. ಬಿಸಿಎ ಮಹಿಳೆಗೆ ಮೀಸಲಾಗಿರುವ ಈ ಸ್ಥಾನಕ್ಕೆ ಜೆಡಿಎಸ್‌ನ 1ನೇ ವಾರ್ಡ್‌ನ ಸದಸ್ಯೆ ಮಮ್ತಾಜ್ ಬಾನು ಹಾಗೂ 7ನೇ ವಾರ್ಡ್ ಪವಿತ್ರಾ ಇದ್ದು ತೀವ್ರ ಪೈಪೋಟಿ ನಡೆಯುತ್ತಿದೆ. ಆದ್ದರಿಂದ ಈ ಸ್ಥಾನದ ಆಯ್ಕೆ ಶಾಸಕ ಎಂ.ಆರ್.ಮಂಜುನಾಥ್ ಅವರ ನಿರ್ಧಾರದ ಮೇಲೆ ನಿಂತಿದೆ. ಹಾಗಾಗಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪ್ರಸ್ತುತ 12 ಸದಸ್ಯರ ಪೈಕಿ ಜೆಡಿಎಸ್‌ನಲ್ಲೇ ಹೆಚ್ಚು ಸದಸ್ಯರು ಇದ್ದಾರೆ. ಹಾಗಾಗಿ ಈ ಸ್ಥಾನವೂ ಜೆಡಿಎಸ್ ಪಾಲಾಗಲಿದೆ. ಈ ಸ್ಥಾನಕ್ಕೆ 13ನೇ ವಾರ್ಡ್‌ನ ಮಹೇಶ್, 8ನೇ ವಾರ್ಡ್‌ನ ಆನಂದ್ ಕುಮಾರ್ ಹಾಗೂ 6ನೇ ವಾರ್ಡ್‌ನ ಮಹೇಶ್‌ನಾಯ್ಕ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಆದ್ದರಿಂದ ಈ ಸ್ಥಾನದ ಆಯ್ಕೆಯೂ ಶಾಸಕರ ತೀರ್ಮಾನ ಆಧರಿಸಿದೆ. ಹಾಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ಗೆ ಎಲ್ಲ ಅವಕಾಶಗಳಿವೆ. ಆದ್ದರಿಂದ ಈ ಬಾರಿ ಶಾಸಕ ಎಂ.ಆರ್. ಮಂಜುನಾಥ್ ನೇತೃತ್ವದಲ್ಲಿ ಪಪಂನ ಆಡಳಿತ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಗೌಪ್ಯ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎದುರಾಗಿರುವುದರಿಂದ ಶಾಸಕ ಎಂ.ಆರ್.ಮಂಜುನಾಥ್ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೌಪ್ಯ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಕೆಲ ಸದಸ್ಯರ ಮನವೊಲಿಕೆ ಪ್ರಯತ್ನವೂ ಕೂಡ ನಡೆದಿದ್ದು ಸಮನಯ್ವತೆ ಸಾಧಿಸಲಾಗಿದೆ ಎಂಬುದಾಗಿ ಕೇಳಿಬರುತ್ತಿದೆ. ಒಟ್ಟಾರೆ ಈ ಬಾರಿ ಜೆಡಿಎಸ್ ಪಪಂ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ. ಪಪಂ ಗುದ್ದುಗೆ ಏರುವವರು ಯಾರು ಎಂಬುದು ಶಾಸಕರ ತೀರ್ಮಾನದ ಮೇಲೆ ನಿಂತಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಸದಸ್ಯರು ಹಾಗೂ ಸಂಬಂಧಪಟ್ಟ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿ ಚರ್ಚಿಸಲಾಗುವುದು. ಒಮ್ಮತದ ತೀರ್ಮಾನ ಕೈಗೊಂಡು ಪಪಂ ಆಡಳಿತದ ಚುಕ್ಕಾಣಿ ಹಿಡಿಯಲಾಗುವುದು.ಎಂ.ಆರ್.ಮಂಜುನಾಥ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net