ಸೆಸ್ಕ್ ಕಚೇರಿ ಎದುರು ರೈತರ ಪ್ರತಿಭಟನೆ

19 HANUR 2
Published on

ಹನೂರು: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಹಾಗೂ ಗುಂಡಾಲ್ ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸೆಸ್ಕ್ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಕೆಲವರು ಹಣ ಪಾವತಿಸಿ 2 ವರ್ಷಗಳಾಗಿವೆ. ಆದರೆ ಟಿಸಿ ಅಳವಡಿಸುವಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ರೈತರು ತುಂಬ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಅಗತ್ಯ ಕ್ರಮವಹಿಸಿ ಟಿಸಿ ಅಳವಡಿಸಬೇಕು. ಗುಂಡಾಲ್ ಜಲಾಶಯಕ್ಕೆ ನದಿ ಮೂಲದಿಂದ ಹರಿಯುತ್ತಿದ್ದ ನೀರು ಸ್ಥಗಿತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜಲಾಶಯಕ್ಕೆ ನೀರು ಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಎಇಇ ಶಂಕರ್ ಟಿಸಿ ಅಳವಡಿಕೆ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಕಾವೇರಿ ನೀರಾವರಿ ನಿಗಮದ ಎಇಇ ರಮೇಶ್ ಮಾತನಾಡಿ, ಕಾವೇರಿ ನದಿಯಲ್ಲಿ ನೀರು ಹೆಚ್ಚಾದ ಕಾರಣ ಟಿಸಿ ಹದಗೆಟ್ಟಿತ್ತು. ಇನ್ನೆರಡು ದಿನದೊಳಗೆ ದುರಸ್ತಿಪಡಿಸಿ ಜಲಾಶಯಕ್ಕೆ ನೀರು ಒದಗಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ನೂತನ ಸಂಘ ರಚನೆ:
ಇದಕ್ಕೂ ಮುನ್ನ ಪಟ್ಟಣದ ಆರ್‌ಎಂಸಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕವನ್ನು ನೂತನವಾಗಿ ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಚಿಕ್ಕರಾಜು, ಉಪಾಧ್ಯಕ್ಷರಾಗಿ ಪ್ರಕಾಶ್ ಹಾಗೂ ಕಾರ್ಯದರ್ಶಿಯಾಗಿ ಪವನ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net