

ಹನೂರು: ಈ ಭಾಗದಲ್ಲಿ ಜಿಯೋ ಮೊಬೈಲ್ ನೆಟ್‌ವರ್ಕ್ ಸೇವೆಯನ್ನು ಆರಂಭಿಸಿರುವುದು ತುಂಬಾ ಅನುಕೂಲವಾಗಿದೆ. ಜತೆಗೆ ಜನರು ಈವರೆಗೂ ಸಂವಹನ ಸಂಪರ್ಕಕ್ಕೆ ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದಂತಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಗಾಜನೂರು ಹಾಗೂ ಹೂಗ್ಯಂ ಗ್ರಾಮದಲ್ಲಿ ಭಾನುವಾರ ಜಿಯೋ ಮೊಬೈಲ್ ನೆಟ್‌ವರ್ಕ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಈ ಭಾಗವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಬಹುತೇಕ ಗ್ರಾಮಗಳು ಅರಣ್ಯದಂಚಿನಲ್ಲಿವೆೆ. ಇಲ್ಲಿನ ಜನರು ಮೂಲ ಸೌಕರ್ಯದಿಂದ ವಂಚಿತರಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಇಂದಿನ ಆಧುನಿಕ ಯುಗದಲ್ಲಿ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಆದರೆ ಈ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಇರಲಿಲ್ಲ. ಇದರಿಂದ ಈ ಭಾಗದ ಜನರು ಸಂವಹನದ ಸಂಪರ್ಕಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಇಲ್ಲಿನ ಜನರಿಗೆ ಮೊಬೈಲ್ ನೆಟ್‌ವರ್ಕ್‌ನದ್ದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಈ ಭಾಗದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮವಾಗಲೀ ನೆಟ್‌ವರ್ಕ್ ಸೇವೆಯನ್ನು ಒದಗಿಸಿ ಕೊಡಬೇಕೆನ್ನುವುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿತ್ತು. ಈ ಹಿನ್ನೆಲೆ ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಸತತ ಪ್ರಯತ್ನದ ಫಲ ಇದೀಗ ಜಿಯೋ ನೆಟ್‌ವರ್ಕ್ ಸೇವೆ ಆರಂಭಿಸಲಾಗಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದ್ದು, ಈವೆರಗೂ ಅನುಭವಿಸುತ್ತಿದ್ದ ಸಮಸ್ಯೆಗೆ ನಿಟ್ಟುಸಿರು ಬಿಟ್ಟಾಂತಾಗಿದೆ ಎಂದು ತಿಳಿಸಿದರಲ್ಲದೆ, ಯಾವುದೇ ಲೋಪದೋಷಗಳು ಉಂಟಾಗದಂತೆ ನಿರಂತರವಾಗಿ ಉತ್ತಮ ಸೇವೆ ಒದಗಿಸಬೇಕು. ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಂತಹಂತವಾಗಿ ಅಭಿವೃದ್ಧಿ:
ಈ ಭಾಗವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಇಲ್ಲಿನ ಜನರು ಕೆಲವು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಕಷ್ಟದ ನಡುವೆ ಜೀವನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹಂತಹಂತವಾಗಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಜತೆಗೆ ಚಾ.ನಗರ ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಆದ್ದರಿಂದ ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು, ಈ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಸಂಬಂಧ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗಲಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸಂತಸದ ಸಂಗತಿ:
ಇದಕ್ಕೂ ಮುನ್ನ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸೇವೆ ಇಲ್ಲದ ಪರಿಣಾಮ ಸಂಬಂಧಿಕರಿಗೆ ಸಾವು, ನೋವಿನ ಘಟನೆ ಹಾಗೂ ಶುಭ ಕಾರ್ಯಗಳ ಬಗ್ಗೆ ತಿಳಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಏನಾದರೂ ತುರ್ತು ಚಿಕಿತ್ಸೆ ಪಡೆಯಬೇಕಾದರೆ ಪಡುಬಾರದ ಕಷ್ಟ ಅನುಭವಿಸುತ್ತಿದ್ದೇವು. ಇದರಿಂದ ಹಲವು ದಶಕಗಳಿಂದ ರೋಸಿ ಹೋಗಿದ್ದೇವು. ಇದೀಗ ಶಾಸಕರು ಮುತುರ್ವಜಿ ವಹಿಸಿ ನೆಟ್‌ವರ್ಕ್ ಸೇವೆಯನ್ನು ಒದಗಿಸಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಳ್ಳೇಗಾಲ ಜಿಯೋ ಕೇಂದ್ರದ ವ್ಯವಸ್ಥಾಪಕ ಮಹಾವೀರ್, ಮುಖಂಡರಾದ ಮಾದೇಶ್, ಬಸವರಾಜು, ಮಂಜೇಶ್, ಮಹದೇವು, ಗೋವಿಂದ, ಇನ್ನಿತರರು ಇದ್ದರು.