

ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 20.47 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಸಲಹೆಗಾರ ಬಸವರಾಜು ತಿಳಿಸಿದರು.
ಪಟ್ಟಣದ ಆರ್‌ಎಂಸಿ ಪ್ರಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಸಂಘದ ವ್ಯಾಪ್ತಿಗೆ 16 ಗ್ರಾಮಗಳು ಒಳಪಟ್ಟಿದ್ದು 1,708 ಸದಸ್ಯರನ್ನು ಒಳಗೊಂಡಿದೆ. ರೈತರು ಹಾಗೂ ಸರ್ಕಾರದಿಂದ ಸಂಘವು 1,29,08,950 ರೂ. ಷೇರು ಹಣವನ್ನು ಹೊಂದಿದೆ. 2023-24ನೇ ಸಾಲಿನಲ್ಲಿ 783 ಸದಸ್ಯರಿಂದ 10.75 ಲಕ್ಷ ರೂ. ಸಾಲ ವಸೂಲಾಗಿದೆ. ಕಳೆದ ಸಾಲಿನಲ್ಲಿ 107 ಸದಸ್ಯರಿಗೆ 1.07 ಕೋಟಿ ರೂ. ಸಾಲ ನೀಡಿದ್ದು, ಈ ಸಾಲಿನಲ್ಲಿ 124 ಸದಸ್ಯರಿಗೆ ಸಾಲ ವಿತರಿಸಲು 1.28 ಕೋಟಿ ರೂ.ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ 8,02,533 ರೂ. ಸಹಾಯಧನ ನೀಡಿದೆ. 2023-24ನೇ ಸಾಲಿನಲ್ಲಿ 20,47,609 ರೂ.ಲಾಭ ಬಂದಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಸಮರ್ಪಕವಾಗಿ ವಿತರಿಸುವುದರ ಜತೆಗೆ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಈ ಕಾರ್ಯವೈಖರಿಯನ್ನು ಮೆಚ್ಚಿ ಎಂಡಿಸಿಸಿ ಬ್ಯಾಂಕ್ ಕಳೆದ 10 ವರ್ಷದಿಂದಲೂ ಉತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಎಂದಿನಂತೆ ಸಹಕಾರ ನೀಡಬೇಕು ಎಂದರು.
ಇದೇ ವೇಳೆ 2023-24ನೇ ಸಾಲಿನ ಆಯವ್ಯಯ ಮಂಡಿಸಿ 2024-25ನೇ ಸಾಲಿನ ಅಂದಾಜು ಆಯವ್ಯಯವನ್ನು ಅನುಮೋದನೆ ಪಡೆಯಲಾಯಿತು. ಸಂಘದ ಅಧ್ಯಕ್ಷ ರಾಚಪ್ಪ, ಉಪಾಧ್ಯಕ್ಷ ಸೈಯದ್ ಬಾಷಾ, ನಿರ್ದೇಶಕರಾದ ಗೋವಿಂದ, ಬಸವರಾಜು, ನಟರಾಜು, ಶಂಕರೇಗೌಡ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಾಲಾಜಿ, ಸಂಘದ ಪ್ರಭಾರ ಸಿಇಒ ನಾಗೇಂದ್ರ ಇದ್ದರು.