ಅನುದಾನ ಕೊರತೆ ಕಾಮಗಾರಿ ಸ್ಥಗಿತ!

11 HANUR 1 C
Published on

ಹನೂರು: ರಾಮನಗುಡ್ಡೆ, ಹುಬ್ಬೆಹುಣಸೆ ಹಾಗೂ ಗುಂಡಾಲ್ ಜಲಾಶಯಕ್ಕೆ 132 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾವೇರಿ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಆದರೆ 8 ಕೋಟಿ ರೂ. ಅನುದಾನದ ಅಲಭ್ಯತೆಯಿಂದ ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಹನೂರು ಭಾಗವು ಹೆಚ್ಚಾಗಿ ಕೃಷಿ ಅವಲಂಬಿತ ಪ್ರದೇಶ. ಇಲ್ಲಿನ ಬಹುತೇಕ ರೈತರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಅದರಲ್ಲಿ ಹೆಚ್ಚು ನೀರು ಸಂಗ್ರಹವಾಗುವ ಮೋಡಹಳ್ಳಿ ಸಮೀಪದ ಗುಂಡಾಲ್ ಜಲಾಶಯ, ಉದ್ದನೂರು ಬಳಿಯ ಹುಬ್ಬೆಹುಣಸೆ ಹೊಸಕೆರೆ ಹಾಗೂ ಮಂಗಲ ಸಮೀಪದ ರಾಮನಗುಡ್ಡೆ ದೊಡ್ಡಕೆರೆ ಆಸುಪಾಸಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಬೇಸಿಗೆ ವೇಳೆ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಡ್ಯಾಂನಲ್ಲಿ ನೀರು ಬತ್ತಿ ಹೋಗುತ್ತಿತ್ತು. ಅಲ್ಲದೆ, ಗುಂಡಾಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿತ್ತು. ಇದರಿಂದ ಅಂತರ್ಜಲ ಮಟ್ಟ ಕುಸಿತಗೊಂಡು ಕೃಷಿಗೆ ಹಿನ್ನಡೆಯಾಗುತ್ತಿತ್ತು. ಜತೆಗೆ, ಈ ಡ್ಯಾಂಗಳ ಆಸುಪಾಸಿನಲ್ಲಿ ಬೋರ್ ಮೂಲಕ ಸಂಪರ್ಕ ಪಡೆದಿದ್ದ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿತ್ತು.

ಈ ಜಲಾಶಯ ಭಾಗದ ರೈತರು ನದಿ ನೀರು ತುಂಬಿಸುವಂತೆ ಕಳೆದ 8 ವರ್ಷದ ಹಿಂದೆ ಅಂದಿನ ಶಾಸಕ ಆರ್. ನರೇಂದ್ರ ಅವರಲ್ಲಿ ಮನವಿ ಮಾಡಿದ್ದರು. ಈ ದಿಸೆಯಲ್ಲಿ ಶಾಸಕರು ಸಿದ್ದರಾಮಯ್ಯ ನೇತೃತ್ವದ ಅಂದಿನ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಫೆ.16, 2016ರಲ್ಲಿ ಹನೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ನದಿ ಮೂಲದಿಂದ ಈ 3 ಕೆರೆಗಳಿಗೆ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಜ.10, 2018 ರಂದು ಹನೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರು ಮಾಡಿ 132 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ ಕಾಮಗಾರಿಯನ್ನು ಪ್ರಾರಂಭಿಸಿ 5 ವರ್ಷವೇ ಕಳೆದಿದೆ. ಆದರೆ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.

ಕಾಮಗಾರಿ ಸ್ಥಗಿತ:
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೈಗೊಂಡ ಪೈಪ್‌ಲೈನ್ ಕಾಮಗಾರಿ ಕಳೆದ ಒಂದೂವರೆ ವರ್ಷದ ಹಿಂದೆಯೇ ಶೇ.90ರಷ್ಟು ಪೂರ್ಣಗೊಂಡಿದೆ. ಈಗಾಗಲೇ ಗುಂಡಾಲ್ ಜಲಾಶಯಕ್ಕೆ ಸಂಪರ್ಕ ಕಲ್ಪಿಸಿದ್ದು, ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗಿದೆ. ಆದರೆ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಡ್ಯಾಂಗೆ ಸಂಪರ್ಕ ಕಲ್ಪಿಸಬೇಕಾದ ಕಾಮಗಾರಿಗೆ 8 ಕೋಟಿ ರೂ. ಅನುದಾನದ ಕೊರತೆಯಿಂದ ಕಳೆದ ಒಂದೂವರೆ ವರ್ಷದಿಂದಲೂ ಬೂದುಬಾಳು ಗ್ರಾಮ ಸಮೀಪದಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ನನೆಗುದಿಗೆ ಬಿದ್ದಿದೆ. ಇದರಿಂದ ಈ ಯೋಜನೆ ಅನುಷ್ಠಾನಗೊಂಡರೂ ಎರಡು ಡ್ಯಾಂಗಳಿಗೆ ನೀರು ತುಂಬಿಸುವ ಭಾಗ್ಯ ಇನ್ನೂ ದಕ್ಕಿಲ್ಲ. ಇದರಿಂದ ಈ ಯೋಜನೆ ಅನುಷ್ಠಾನಗೊಂಡ ವೇಳೆ ಹರ್ಷ ವ್ಯಕ್ತಪಡಿಸಿದ್ದ ರೈತರು ಇದೀಗ ನಿರಾಶೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುತುರ್ವಜಿ ವಹಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಡ್ಯಾಂಗಳ ಸಾಮರ್ಥ್ಯ, ಪ್ರಯೋಜನ ಪಡೆಯುವ ಗ್ರಾಮಗಳು:
ಈ ಯೋಜನೆಯ ಉದ್ದೇಶ ಕೃಷಿಗೆ ನೀರಾವರಿ ಸೌಕರ್ಯವನ್ನು ಒದಗಿಸುವುದರ ಜತೆಗೆ, ಅಂತರ್ಜಲ ಮಟ್ಟವನ್ನು ಸುಧಾರಿಸುವುದಾಗಿದೆ. ಈ ದಿಸೆಯಲ್ಲಿ ರಾಮನಗುಡ್ಡೆಯ ಡ್ಯಾಂ 2,660 ಕ್ಯೂಸೆಕ್ ನೀರಿನ ಸಂಗ್ರಹಣ ಸಾಮರ್ಥ್ಯವನ್ನು ಹೊಂದಿದ್ದು, ಎಡ ಹಾಗೂ ಬಲದಂಡೆ ಕಾಲುವೆಯಿಂದ ಒಟ್ಟು 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಬಹುದಾಗಿದೆ. ಈ ಡ್ಯಾಂನಿಂದ ಹುಲ್ಲೇಪುರ, ಮಂಗಲ, ಎಡಳ್ಳಿದೊಡ್ಡಿ, ಚಿಂಚಳ್ಳಿ ಹಾಗೂ ಮಣಗಳ್ಳಿ ಗ್ರಾಮಗಳು ಪ್ರಯೋಜನ ಪಡೆಯಲಿವೆ. ಇನ್ನು ಹುಬ್ಬೆಹುಣಸೆ ಡ್ಯಾಂ 9.96 ಕ್ಯೂಸೆಕ್ ನೀರಿನ ಸಾಮರ್ಥ್ಯ ಹೊಂದಿದ್ದು, 200 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಒದಗಿಸಬಹುದಾಗಿದೆ. ಈ ಡ್ಯಾಂನಿಂದ ಹನೂರು, ಉದ್ದನೂರು ಹಾಗೂ ಬೆಳತ್ತೂರು ಗ್ರಾಮಗಳು ಪ್ರಯೋಜನ ಪಡೆದರೆ,್ನ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಗುಂಡಾಲ್ ಜಲಾಶಯ 15,100 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತಿದ್ದು, ಕಣ್ಣೂರು, ಮಂಗಲ, ಕಾಮಗೆರೆ, ದೊಡ್ಡಿಂದುವಾಡಿ, ಸಿಂಗಾನಲ್ಲೂರು ಸೇರಿದಂತೆ ಈ ಭಾಗದ ಗ್ರಾಮಗಳು ನೀರಾವರಿ ಯೋಜನೆಗೆ ಒಳಪಟ್ಟಿವೆ.

ಬತ್ತಿಹೋಗುತ್ತಿವೆ ಡ್ಯಾಂಗಳು:
ಪ್ರಸ್ತುತ ಗುಂಡಾಲ್ ಜಲಾಶಯಕ್ಕೆ ನೀರು ಪೂರೈಕೆಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಗಳ ಮೂಲಕ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆಯಾಗುತ್ತಿದೆ. ಆದರೆ ಮಳೆಗಾಲದಲ್ಲಿ ಭರ್ತಿಯಾಗಿದ್ದ ಹುಬ್ಬೆಹುಣಸೆ ಡ್ಯಾಂನಲ್ಲಿ ನೀರಿನ ಸಂಗ್ರಹಣ ಪ್ರಮಾಣ ಕುಸಿದಿದೆ. ಇನ್ನು ಬತ್ತಿಹೋಗಿದ್ದ ರಾಮನಗುಡ್ಡೆ ಡ್ಯಾಂನಲ್ಲಿ ಇದೀಗ ಮಳೆ ನೀರು ಅಲ್ಪ ಪ್ರಮಾಣದಲ್ಲಿ ನಿಂತಿದೆ. ಇದರಿಂದ ಡ್ಯಾಂಗಳು ಬತ್ತಿ ಹೋಗುತ್ತಿದ್ದು, ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದ ಅಂತರ್ಜಲ ಕುಸಿತಗೊಂಡಿದ್ದು, ಈ ಭಾಗದ ರೈತರು ನೀರಾವರಿ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಈ ಡ್ಯಾಂಗಳಿಗೆ ನೀರು ತುಂಬಿಸುವುದು ಅಗತ್ಯವಾಗಿದೆ.

ಶಾಸಕರು ಅಗತ್ಯ ಮುತುರ್ವಜಿ ವಹಿಸಬೇಕಿದೆ:
ಹಿಂದಿನ ಶಾಸಕ ಆರ್.ನರೇಂದ್ರ ಅವರು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಆದ್ದರಿಂದ ಶಾಸಕ ಎಂ.ಆರ್.ಮಂಜುನಾಥ್ ಅವರು ಈ ಬಗ್ಗೆ ಅಗತ್ಯ ಮುತುರ್ವಜಿ ವಹಿಸಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗುವುದರ ಮೂಲಕ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಕ್ಷೇತ್ರದ 3 ಡ್ಯಾಂಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡ ವೇಳೆ ರೈತರು ತುಂಬ ಖುಷಿ ವ್ಯಕ್ತಪಡಿಸಿದ್ದರು. ಆದರೆ ಗುಂಡಾಲ್ ಜಲಾಶಯವನ್ನು ಹೊರತುಪಡಿಸಿದರೆ ನಮ್ಮ ಗ್ರಾಮ ಸಮೀಪದ ಹುಬ್ಬೆಹುಣಸೆ ಹಾಗೂ ರಾಮನಗುಡ್ಡೆ ಡ್ಯಾಂಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ರೈತರಲ್ಲಿ ನಿರಾಶೆ ವ್ಯಕ್ತವಾಗಿದ್ದು, ಕೃಷಿಗೆ ತೊಡುಕಾಗಿ ಪರಿಣಮಿಸಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಡ್ಯಾಂಗಳಿಗೆ ನೀರು ತುಂಬಿಸಬೇಕು.ನಾಗಣ್ಣ, ಬೆಳತ್ತೂರು ಗ್ರಾಮಸ್ಥ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಡ್ಯಾಂಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಕಾಮಗಾರಿಯಲ್ಲಿ ಬದಲಾವಣೆಯ ಹಿನ್ನಲೆ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಸಂಬಂಧ ಈಗಾಗಲೇ 8 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಂತ್ರಿಕ ಒಪ್ಪಿಗೆಯಷ್ಟೇ ಬಾಕಿ ಇದ್ದು, ಅನುಮೋದನೆ ಆಗಬೇಕಿದೆ.ಮಂಜುನಾಥ್, ಎಇಇ ಕಾವೇರಿ ನೀರಾವರಿ ನಿಗಮ ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net