

ಹನೂರು: ಪಟ್ಟಣದ ಹೊರವಲಯದ ನಿರ್ಜನ ಪ್ರದೇಶಗಳಿಗೆ ಬುಧವಾರ ಇನ್‌ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಕಾನೂನು ಬಾಹಿರ ಚಟುವಟಿಕೆಗಳ ಸಂಬಂಧ ಪರಿಶೀಲನೆ ನಡೆಸಿದರು.
ಪಟ್ಟಣದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಕೆಲವರು ಗುಂಪುಗೂಡಿ ಮದ್ಯ ಸೇವಿಸಿ ಮನಬಂದಂತೆ ದಾಂಧಲೆ ನಡೆಸುತ್ತಿದ್ದರು. ಇದರಿಂದ ವಾಯುವಿಹಾರಕ್ಕೆ ತೆರಳುವವರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದರು. ಈ ಕಾರಣ ಸಾರ್ವಜನಿಕರು ಪೊಲೀಸರಿಗೆ ಮೌಖಿಕ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಶಶಿಕುಮಾರ್, ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ನಿರ್ಜನ ಪ್ರದೇಶದ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಇನ್‌ಸ್ಪೆಕ್ಟರ್ ಶಶಿಕುಮಾರ್ ಮಾತನಾಡಿ, ಈ ಸ್ಥಳಗಳಲ್ಲಿ ಕೆಲವರು ಮದ್ಯ ಸೇವಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು. ಇಲ್ಲಿ ಗುಂಪು ಗೂಡುವುದು ಸರಿಯಲ್ಲ. ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸ್ಥಳದಲ್ಲಿದ್ದ ಯುವಕರಿಗೆ ತಿಳಿವಳಿಕೆ ಹೇಳಿ ಕಳುಹಿಸಿದರು.