

ಹನೂರು; ಪಟ್ಟಣದಿಂದ ಅಜ್ಜೀಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಬುಧವಾರ ಹೂಗ್ಯಂ ಮಾರ್ಗದ ಸಾರಿಗೆ ಬಸ್ ಕೆಟ್ಟು ನಿಂತ ಪರಿಣಾಮ ಸಾರ್ವಜನಿಕರು ಕೆಲಕಾಲ ತೊಂದರೆ ಅನುಭವಿಸಿದರು.
ಬೆಳಗ್ಗೆ 11ರ ವೇಳೆಯಲ್ಲಿ ಹೂಗ್ಯಂ ಗ್ರಾಮದಿಂದ ಪಟ್ಟಣದತ್ತ ಆಗಮಿಸುತ್ತಿದ್ದ ಸಾರಿಗೆ ಬಸ್ ಈ ಮಾರ್ಗದಲ್ಲಿ ಕೆಟ್ಟು ನಿಂತಿತು. ಇದರಿಂದ ಕೆಲಸ ಕಾರ್ಯಗಳ ನಿಮಿತ್ತ ಹನೂರು ಹಾಗೂ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಮಾರ್ಗಮಧ್ಯೆದಲ್ಲಿಯೇ ನಿಲ್ಲುವಂತಾಯಿತು. ಬಳಿಕ ಬೇರೊಂದು ಬಸ್ ಮೂಲಕ ಪ್ರಯಾಣಿಕರು ತೆರಳಬೇಕಾಯಿತು.
ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಹಳೆಯದಾಗಿದ್ದು, ಆಗಾಗ್ಗೆ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಈ ಭಾಗಕ್ಕೆ ಹೊಸ ಬಸ್ ಬಿಡುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಂತೆ ಕೂಡಲೂರು ವೆಂಕಟಾಚಲ ಒತ್ತಾಯಿಸಿದ್ದಾರೆ.