ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಗುರುಲಿಂಗಯ್ಯ

oppo_2
oppo_2
Published on

ಹನೂರು: ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಲಿಂಗಯ್ಯ ಬುಧವಾರ ಹನೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

ಬಿಇಒ ಆಗಿದ್ದ ಶಿವರಾಜು ಅವರು ಲೋಕಾಯುಕ್ತ ದಾಳಿಗೊಳಗಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಅವರನ್ನು ಪ್ರಭಾರ ಬಿಇಒ ಆಗಿ ನಿಯೋಜಿಸಲಾಗಿತ್ತು. ಇದೀಗ ನೂತನ ಬಿಇಒ ಆಗಿ ಗುರುಲಿಂಗಯ್ಯ ಅಧಿಕಾರ ವಹಿಸಿಕೊಂಡರು. ಶೈಕ್ಷಣಿಕ ಅಭಿವೃದ್ಧಿಗೆ ಒತ್ತು: ಈಗಾಗಲೇ ಶೈಕ್ಷಣಿಕ ವಲಯದಲ್ಲಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಹಾಗೆಯೇ ಇಲ್ಲಿನ ಶಿಕ್ಷಕರು ಹಾಗೂ ಶಾಲೆಗಳ ಪರಿಚಯವಿದೆ. ಶಿಕ್ಷಕರ ಕೊರತೆಯನ್ನು ನೀಗಿಸುವ ಸಂಬಂಧ ಮಾಹಿತಿ ಪಡೆದು ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಗುರುಲಿಂಗಯ್ಯ ವಿಜಯವಾಣಿಗೆ ತಿಳಿಸಿದರು.

ಐದಾರು ವರ್ಷದಿಂದ ಶೈಕ್ಷಣಿಕ ವಲಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತಿತ್ತು. ಆದರೆ ಕಳೆದ ಸಾಲಿನಲ್ಲಿ ಕೊನೆಯ ಸ್ಥಾನ ಪಡೆದಿರುವುದು ವಿಪರ್ಯಾಸ. ಹಾಗಾಗಿ ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಉತ್ತಮ ಫಲಿತಾಂಶಕ್ಕಾಗಿ ಯೋಜನೆ ರೂಪಿಸಲಾಗುವುದು. ಕೊಠಡಿಗಳ ರಿಪೇರಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕ್ರೀಡಾ ಸ್ಥಳಕ್ಕೆ ಭೇಟಿ: ಅಧಿಕಾರ ವಹಿಸಿಕೊಂಡ ಬಳಿಕ ಬಿಇಒ ಗುರುಲಿಂಗಯ್ಯ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯುತ್ತಿರುವ ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಸಲಹೆ ನೀಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಸಿಆರ್‌ಪಿ ದೇವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net