ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತ

Published on

ಹನೂರು: ಅನುದಾನದ ಕೊರತೆಯಿಂದ ವಾರ್ಡ್‌ಗಳು ಅಭಿವೃದ್ಧಿಯಾಗಿಲ್ಲ. ವಾಣಿಜ್ಯ ಮಳಿಗೆಗಳಿಂದ ಸಮರ್ಪಕವಾಗಿ ಬಾಡಿಗೆ ವಸೂಲಾಗುತ್ತಿಲ್ಲ. ರಸ್ತೆಗಳಿಗೆ ಇ ಸ್ವತ್ತು ಮಾಡಿಕೊಡಲಾಗಿದೆ. ಬಿಲ್ ಪಾವತಿಯಲ್ಲಿ ಅವ್ಯವಹಾರ ನಡೆದಿದೆ. ಜನತೆಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ತೀವ್ರ ವಿಳಂಬವಾಗುತ್ತಿದೆ. ಹಾಗಾಗಿ ಜನರು ನಮ್ಮನ್ನು ಬೈಯುತ್ತಿದ್ದಾರೆ…

ಇದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ‘15ನೇ ಹಣಕಾಸು ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸುವ ತುರ್ತು ಸಭೆ’ ಯಲ್ಲಿ ಕೇಳಿಬಂದ ಪ್ರಮುಖ ಆರೋಪಗಳು.

ಪಪಂ ಸದಸ್ಯ ಮಹೇಶ್ ಮಾತನಾಡಿ, ವಾರ್ಡ್‌ಗಳಿಗೆ ಸಮರ್ಪಕವಾಗಿ ಅನುದಾನ ನೀಡದ ಪರಿಣಾಮ ಅಗತ್ಯ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ ಎಂದು ದೂರಿದರು. ವಾರ್ಡ್‌ಗಳಲ್ಲಿ ಆಶ್ರಯ ಬಡಾವಣೆಯ ಅಭಿವೃದ್ಧಿ ಮರೀಚಿಕೆಯಾಗಿದೆ. ಇತ್ತ ಪಟ್ಟಣದಲ್ಲಿ ಕೆಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದರ ಜವಾಬ್ದಾರಿ ಹೊತ್ತ ಅಧಿಕಾರಿಗಳು ಪಪಂ ಗಮನಕ್ಕೆ ತಾರದೇ ವಿದ್ಯುತ್ ಕಂಬಗಳನ್ನು ಬೇಕಾಬಿಟ್ಟಿಯಾಗಿ ತೆರವುಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ?
ಎಂದು ನೇರ ಆರೋಪ ಮಾಡಿದರು.

ಪಪಂ ವ್ಯಾಪ್ತಿಯಲ್ಲಿ ಕೆಲವು ರಸ್ತೆಗಳಿಗೆ ಇ ಸ್ವತ್ತು ನೀಡಲಾಗಿದೆ. ಕೆಲವರು ಈಗಾಗಲೇ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ. ಪಪಂನಿಂದ ನಿರ್ಮಿಸಿರುವ ಅಂಗಡಿಗಳಿಂದ ಸಮರ್ಪಕವಾಗಿ ಬಾಡಿಗೆ ವಸೂಲಾತಿ ಆಗುತ್ತಿಲ್ಲ. ಇದರಿಂದ ಪಪಂಗೆ ಬರಬೇಕಾದ ಆದಾಯ ಕ್ಷೀಣಿಸಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಂಪೂರ್ಣ ಮಾಹಿತಿ ನೀಡಿ: ಸದಸ್ಯ ಸುದೇಶ್ ಮಾತನಾಡಿ, ಪಪಂ ವತಿಯಿಂದ ಕೈಗೊಳ್ಳಲಾಗಿರುವ ಕೆಲವು ಕಾಮಗಾರಿಗಳಿಗೆ ಪಾವತಿಯಾದ ಬಿಲ್ನಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಆದ್ದರಿಂದ 2023, ಏಪ್ರಿಲ್ನಿಂದ 2024 ಜೂನ್ 30ರವರೆಗೆ ಪಾವತಿಯಾದ ಬಿಲ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಹಾಗೆಯೇ ಜಲ ಜೀವನ್ ಮಿಷನ್ ಯೋಜನೆಯಡಿ ವಾರ್ಡ್‌ಗಳಲ್ಲಿ ಕೈಗೊಳ್ಳಲಾದ ಪೈಪ್‌ಲೈನ್ ಕಾಮಗಾರಿಯಿಂದ ಸಿಸಿ ರಸ್ತೆ ಹಾಳಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ಪವಿತ್ರಾ ಮಾತನಾಡಿ, ನಮ್ಮ ವಾರ್ಡಿನಲ್ಲಿ ಚರಂಡಿ ಸೂಕ್ತವಾಗಿ ಇಲ್ಲದ ಪರಿಣಾಮ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಚರಂಡಿ ನಿರ್ಮಿಸುವುದರ ಜತೆಗೆ ವಾರ್ಡಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ಶೌಚಗೃಹ ಸುಸ್ಥಿತಿಯಲ್ಲಿರಲಿ: ಸಾಮಾನ್ಯವಾಗಿ ವಾರ್ಡ್‌ಗಳ ಅಗತ್ಯಕ್ಕೆ ತಕ್ಕಂತೆ ಅನುದಾನ ಹಂಚಿಕೆ ಮಾಡಬೇಕು. ಅಭಿವೃದ್ಧಿ ಕಾರ್ಯಗಳಾಗಬೇಕು. ಅಗತ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ನಿರ್ವಹಣೆಯ ಕೊರತೆಯಿಂದ ಆಗಾಗ್ಗೆ ಬಾಗಿಲು ಮುಚ್ಚುತ್ತಿರುವ ಸಾರ್ವಜನಿಕ ಶೌಚಗೃಹಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಭರವಸೆ: ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ಗುರುಪ್ರಸಾದ್ ಮಾತನಾಡಿ, ಎಲ್ಲ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳುವೆ ಎಂದು ಭರವಸೆ ನೀಡಿದರು. ಮುಂದಿನ ಸಾಮಾನ್ಯ ಸಭೆಯಲ್ಲಿ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ಮುಖ್ಯಾಧಿಕಾರಿ ಅಶೋಕ್ ತಿಳಿಸಿದರು.ಎಸ್‌ಎಫ್‌ಸಿ ಯೋಜನೆಯಡಿ ಪರಿಶಿಷ್ಟ ಜಾತಿ, ಬಡವರ ಕಲ್ಯಾಣ ಹಾಗೂ ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲು ಅನುದಾನ, ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ, ಕೈಗೊಳ್ಳಬೇಕಾದ ಸಿವಿಲ್ ಕಾಮಗಾರಿ ಸಂಬಂಧ ಕ್ರಿಯಾಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ 43.40 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ಸದಸ್ಯರಾದ ಗಿರೀಶ್‌ಕುಮಾರ್, ಆನಂದ್, ಹರೀಶ್‌ಕುಮಾರ್, ಮಹೇಶ ನಾಯ್ಕ, ಸೋಮಶೇಖರ, ಪೂರ್ಣಿಮಾ, ಮಮ್ತಾಜ್ ಬಾನು, ಮಂಜುಳಾ, ಇಂಜಿನಿಯರ್ ದೇವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net