

ಹನೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿರುವ ಪರಿಣಾಮ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಇದೀಗ ಮತ್ತೆ ಸೊಬಗನ್ನು ಪಡೆದಿದೆ.
ಮಹದೇಶ್ವರ ಬೆಟ್ಟದಿಂದ ಸುಮಾರು 50 ಕಿ.ಮೀ ಅಂತರದಲ್ಲಿರುವ ಹೊಗೇನಕಲ್ ಫಾಲ್ಸ್ ಕಾವೇರಿ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಾಗಿದೆ. ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ಹಾಗೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೂ ಆಗಮಿಸುತ್ತಾರೆ. ಕಳೆದ 6 ತಿಂಗಳ ಹಿಂದೆ ಮಳೆಯಿಲ್ಲದ ಪರಿಣಾಮ ಫಾಲ್ಸ್ ಬರಿದಾಗಿತ್ತು. ಆದರೆ ಇದೀಗ ಒಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ನಿಂದ ಸುಮಾರು 17 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ಇದರಿಂದ ನದಿ ಪಾತ್ರಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಕಾನನದ ನಡುವೆ ಕಾವೇರಿ ಭೋರ್ಗರೆದು ಹರಿಯುತ್ತಿದೆ. ಜತೆಗೆ ಕಲ್ಲು ಬಂಡೆಗಳನ್ನು ಹೊಂದಿರುವ ಹೊಗೇನಕಲ್ ಫಾಲ್ಸ್ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ. ಹಾಗಾಗಿ ಒಣಗಿ ನಿಂತಿದ್ದ ಹೊಗೇನಕಲ್ ಜಲಪಾತ ಇದೀಗ ಮತ್ತೆ ಕಳೆ ಪಡೆದುಕೊಂಡಿದೆ.
ಪ್ರವಾಸಿಗರಿಗೆ ನಿಷೇಧ
ಫಾಲ್ಸ್‌ಗೆ ಕರ್ನಾಟಕ ಹಾಗೂ ತಮಿಳುನಾಡಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಾಡಿಕೆ. ಕಳೆದ 5 ತಿಂಗಳ ಹಿಂದೆ ಫಾಲ್ಸ್ ಬರಿದಾಗಿದ್ದರಿಂದ ಈ ವೇಳೆ ವೀಕ್ಷಣೆಗಾಗಿ ಆಗಮಿಸಿದ್ದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗಬೇಕಾಗಿತ್ತು. ಆದರೀಗ ಕಾವೇರಿ ಜಲಾನಯದ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೊಗೇನಕಲ್ ಜಲಪಾತ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯುತ್ತಿದ್ದು, ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿದೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ಪ್ರವಾಸಿಗರನ್ನು ತಡೆದು ಕಳುಹಿಸಲಾಗುತ್ತಿದೆ. ಇದರಿಂದ ಫಾಲ್ಸ್‌ನ ನಯನ ಮನೋಹರ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಆಗದೆ ನಿರಾಸೆಯಿಂದ ಹಿಂದಿರುಗಬೇಕಿದೆ.
ತೆಪ್ಪ ಸಂಚಾರ ನಿಷೇಧ
ಭಾರತದ ನಯಾಗರ ಜಲಪಾತ ಎಂದೇ ಹೆಸರು ಪಡೆದಿರುವ ಹೊಗೇನಕಲ್ ಫಾಲ್ಸ್‌ನ ರಮಣೀಯ ದೃಶ್ಯವನ್ನು ವೀಕ್ಷಿಸಲು ವಾರಾತ್ಯಂದ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಬೋಟೀಂಗ್ ಮೂಲಕ ಫಾಲ್ಸ್ ಹಾಗೂ ಸುತ್ತಮುತ್ತಲ ಕಡಲಿನ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಆದರೆ ಇದೀಗ ಫಾಲ್ಸ್ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ತೆಪ್ಪ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದ ಪ್ರವಾಸಿಗರು ಬೋಟಿಂಗ್ ಮೂಲಕ ಜಲಪಾತವನ್ನು ವೀಕ್ಷಿಸಲು ಸಾಧ್ಯವಿಲ್ಲದಂತಾಗಿದೆ. ಇತ್ತ ತೆಪ್ಪ ನಡೆಸುವುದರಿಂದಲೇ ಜೀವನ ನಡೆಸುತ್ತಿದ್ದ ಸುಮಾರು 200ಕ್ಕೂ ಹೆಚ್ಚು ಜನರಿಗೆ ಆದಾಯ ಕೈ ತಪ್ಪಿ ಹೋಗಿದೆ.
ಭೋರ್ಗರೆತದ ಸದ್ದು
ಕಾವೇರಿ ವನ್ಯಜೀವಿ ಧಾಮದ ಕಾನನದ ನಡುವೆ ಹಾದು ಹೋಗಿರುವ ನದಿಯಲ್ಲಿ ನೀರಿನ ಭೋರ್ಗರೆತದ ಸದ್ದು ವಿಪರೀತವಾಗಿದೆ. ಜತೆಗೆ ಜಲಪಾತದಲ್ಲಿ ರುದ್ರ ರಮಣೀಯ ನೃತ್ಯ ಝೇಂಕರಿಸುತ್ತಿದ್ದು, ಕಾವೇರಿ ಒಡಲಿನ ಮೂಲಕ ನೀರು ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಇತ್ತ ಗೋಪಿನಾಥಂ, ಸೂರೆಕಾಯಿ ಮಡುವಿನ ಬಳಿ ಹಿನ್ನೀರಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಆದ್ದರಿಂದ ಹೊಗೇನಕಲ್ ಜಲಪಾತ ಮೈದುಂಬಿ ಹರಿಯುತ್ತಿದ್ದು, ಇದರ ಒಡಲಿನಲ್ಲಿ ನೀರಿನ ಆರ್ಭಟವೂ ಹೆಚ್ಚಾಗಿದೆ.
ನಿರ್ಮಾಣವಾಗದ ಪಾಲಿಮೇಡು ಸೇತುವೆ
ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಲಾಪಾತವನ್ನು ವೀಕ್ಷಿಸಲು ಪಾಲಿಮೇಡಿನ ಬಳಿ ಸೇತುವೆ ನಿರ್ಮಿಸಲಾಗಿತ್ತು. ಮಳೆಗಾಲದ ವೇಳೆ ಹೆಚ್ಚಿನ ನೀರಿನ ಹರಿವಿದ್ದರೂ ಪ್ರವಾಸಿಗರು ಸೇತುವೆ ಮೂಲಕ ಜಲಪಾತವನ್ನು ವೀಕ್ಷಿಸುತ್ತಿದ್ದರು. ಆದರೆ ಕಳೆದ 5 ವರ್ಷದ ಹಿಂದೆ ನೀರಿನ ರಭಸಕ್ಕೆ ಪಾಲಿಮೇಡು ಸೇತುವೆ ಕೊಚ್ಚಿ ಹೋಗಿದೆ. ಸೇತುವೆಯನ್ನು ನಿರ್ಮಿಸುವಂತೆ ಪ್ರವಾಸಿಗರು ಆಗ್ರಹಿಸಿದ್ದರು. ಆದರೆ ಈವೆರಗೂ ಸಾಧ್ಯವಾಗಿಲ್ಲ. ಸೇತುವೆ ನಿರ್ಮಾಣವಾಗಿದ್ದರೆ ಇದೀಗ ಜಲಾಪಾತದ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಿತ್ತು.