ತಡೆಗೋಡೆ ರಿಪೇರಿಗೆ ಮುಂದಾದ ಇಲಾಖೆ

21 HANUR 1
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಆನೆತಲೆ ದಿಂಬ ತಿರುವಿನಲ್ಲಿ ಕುಸಿದಿದ್ದ ತಡೆಗೋಡೆ ರಿಪೇರಿಗೆ ಕೊನೆಗೂ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ಶನಿವಾರ ಕಾಮಗಾರಿ ಕೈಗೊಳ್ಳಲಾಗಿದೆ.

ಎರಡು ವರ್ಷಗಳ ಹಿಂದೆ ಕಡಿದಾದ ಇಳಿಜಾರು ಹಾಗೂ ಕಿರಿದಾದ ರಸ್ತೆ ಹೊಂದಿರುವ ಆನೆತಲೆ ದಿಂಬದ ತಿರುವಿನಲ್ಲಿ ಕರಿಕಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಕೆಳ ಭಾಗದ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕಬ್ಬಿಣದ ತಡೆಗೋಡೆ ಹಾಗೂ ಕಲ್ಲುಗಳು ಕಿತ್ತು ಬಂದಿತ್ತು. ಇದರಿಂದ ಈ ಸ್ಥಳ ಅಪಾಯ ಸೂಚಿಸುವ ಎಚ್ಚರಿಕೆ ಗಂಟೆಯಾಗಿತ್ತು. ಇಲ್ಲಿ ವಾಹನ ಸವಾರರು ಸಂಚರಿಸಬೇಕಾದರೆ ಜೀವ ಭಯ ಕಾಡುತ್ತಿತ್ತು.

ಮಹದೇಶ್ವರ ಬೆಟ್ಟಕ್ಕೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಕಾರಣ ತಡೆಗೋಡೆಯನ್ನು ರಿಪೇರಿ ಪಡಿಸುವಂತೆ ಭಕ್ತರಿಂದ ಆಗಾಗ್ಗೆ ಒತ್ತಾಯ ಮಾಡುತ್ತಿದ್ದರಾದರೂ ಪಿಡಬ್ಲೃಹುಡಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ. ಬಳಿಕ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿತ್ತು.

ಇತ್ತ ಕಳೆದ ನಾಲ್ಕೈದು ದಿನಗಳ ಹಿಂದೆ ಆಗಾಗ್ಗೆ ಸುರಿದ ಮಳೆಗೆ ಇದೇ ಮಾರ್ಗದ ರಂಗಸ್ವಾಮಿ ಒಡ್ಡುವಿನ ಮುಂಭಾಗ ರಸ್ತೆಯಲ್ಲಿ ದೊಡ್ಡದಾದ ಗುಂಡಿ ನಿರ್ಮಾಣವಾಗಿ ನೀರು ನಿಲ್ಲುವಂತಾಗಿತ್ತು. ಇದರಿಂದ ವಾಹನ ಸವಾರರು ಸಂಚರಿಸಲು ತೊಂದರೆ ಪಡುತ್ತಿದ್ದರು. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ರಿಪೇರಿ ಪಡಿಸುವಂತೆ ಒತ್ತಾಯಿಸಿದ್ದರು.

ಇದರಿಂದ ಎಚ್ಚೆತ್ತ ಪಿಡಬ್ಲುೃಡಿ ಇಇ ಮಹೇಶ್, ಎಇಇ ಚಿನ್ನಣ್ಣ ಹಾಗೂ ಎಇ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ರಂಗಸ್ವಾಮಿ ಒಡ್ಡುವಿನ ಬಳಿ ನಿರ್ಮಾಣವಾಗಿದ್ದ ಗುಂಡಿಗೆ ತಾತ್ಕಲಿಕವಾಗಿ ತೇಪೆ ಹಾಕುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಇತ್ತ ಕಳೆದ 2 ವರ್ಷದಿಂದಲೂ ರಿಪೇರಿ ಕಾಣದ ಆನೆತಲೆ ದಿಂಬದ ತಡೆಗೋಡೆಯ ಕಾಯಕಲ್ಪಕ್ಕೂ ಮುಂದಾಗಿದ್ದಾರೆ. ಇದರಿಂದ ಭಕ್ತರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದ್ದು, ಈ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net