ಜೀವ ಭಯದಲ್ಲಿ ಪಾಠ ಕೇಳು ಸ್ಥಿತಿ

oppo_2
oppo_2
Published on

ಹನೂರು: ತಾಲೂಕಿನ ಶಾಗ್ಯ ಸರ್ಕಾರಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳೆಲ್ಲವೂ ಶಿಥಿಲಗೊಂಡಿದ್ದು, ಕುಸಿಯುವ ಹಂತದಲ್ಲಿದೆ. ಇದರಿಂದ ಮೂಲ ಸೌಕರ್ಯವೇ ಇಲ್ಲದಂತಾಗಿದೆ. ಪರಿಣಾಮ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಕ್ಕಳ ಪಾಠ, ಪ್ರವಚನಗಳಿಗೆ ತುಂಬ ತೊಂದರೆಯಾಗಿದೆ.

ಗ್ರಾಮದ ಶಾಲೆಯು 1948 ರಲ್ಲಿ ಸ್ಥಾಪನೆಯಾಗಿದ್ದು, 75 ವರ್ಷ ಪೂರೈಸಿದೆ. ಪ್ರಸ್ತುತ ಈ ಶಾಲೆಯಲ್ಲಿ ಶಾಗ್ಯ ಸೇರಿದಂತೆ ಕಳ್ಳಿದೊಡ್ಡಿ, ಪುಷ್ಪಾಪುರ, ಗಾಣಿಗಮಂಗಲ ಹಾಗೂ ಬೀರೂಟ ಗ್ರಾಮದ ವಿದ್ಯಾರ್ಥಿಗಳು ದಾಖಲಾಗಿದ್ದು, ಪ್ರಸ್ತುತ 1 ರಿಂದ 8ನೇ ತರಗತಿಯವರೆಗೆ 189 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಆರಂಭದ ವೇಳೆ 5 ಹೆಂಚಿನ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಬಳಿಕ 3 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ 2 ವರ್ಷದಿಂದ ಹೆಂಚಿನ ಕೊಠಡಿಗಳು ಛಾವಣಿ ಸಂಪೂರ್ಣ ಹಾಳಾಗಿದ್ದು, ಹೆಂಚುಗಳು ಹಾರಿ ಹೋಗಿವೆ. ಗೋಡೆಗಳು ಬಿರುಕು ಬಿಟ್ಟಿವೆ.

ಇನ್ನು ಆರ್‌ಸಿಸಿಯಿಂದ ಕೂಡಿದ ಕೊಠಡಿಗಳಲ್ಲಿ ಮಳೆ ನೀರು ಜಿನುಗುತ್ತಿದೆ. ಇದರಿಂದ ಇಲ್ಲಿನ ಮಕ್ಕಳಿಗೆ ಮೂಲಸೌಕರ್ಯ ಇಲ್ಲದಂತಾಗಿದ್ದು, ತೊಂದರೆಯ ನಡುವೆಯೇ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ನಿಜಕ್ಕೂ ವಿಪರ್ಯಾಸ.

ಕುಸಿಯುವ ಹಂತದಲ್ಲಿ ಕೊಠಡಿಗಳು: ಮಾನ್ಸೂನ್ ಪರಿಣಾಮ ಕಳೆದ ನಾಲ್ಕೈದು ದಿನಗಳಿಂದ ಜೋರು ಮಳೆ ಸುರಿಯುತ್ತಿದೆ. ಪರಿಣಾಮ ಶಿಥಿಲಗೊಂಡಿರುವ ಶಾಲೆಯ ಎಲ್ಲ್ಲ ಕೊಠಡಿಗಳಲ್ಲಿ ಛಾವಣಿಯಿಂದ ನೀರು ಸೋರುತ್ತಿರುವುದು ಒಂದೆಡೆಯಾದರೆ 2 ಹೆಂಚಿನ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿಯುವ ಹಂತದಲ್ಲಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳನ್ನು ಶಿಕ್ಷಕರು ಬೇರೆ ತರಗತಿಯ ವಿದ್ಯಾರ್ಥಿಗಳೊಂದಿಗೆ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೋರು ಮಳೆಯಾದರೆ ಈ ಕೊಠಡಿಯಲ್ಲೂ ನೀರು ಸೋರುತ್ತಿದೆ. ಇದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತುಂಬ ತೊಂದರೆಯಾಗಿದೆ.

ಜೀವಭಯದಲ್ಲೇ ಪಾಠ: ಕೊಠಡಿಗಳು ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆಯಲ್ಲಿ ಜೀವ ಭಯದಲ್ಲೇ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಕುಸಿಯುವ ಹಂತದ ಕೊಠಡಿಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದರಿಂದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಇದು ಎಷ್ಟ ಮಟ್ಟಿಗೆ ಸರಿ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆಯಂತಾಗುವ ಶಾಲಾ ಆವರಣ: ಇನ್ನು ಹೊಸದಾಗಿ ನಿರ್ಮಿಸಿರುವ 3 ಕೊಠಡಿಗಳ ಛಾವಣಿ ಹಾಗೂ ಗೋಡೆ ಶಿಥಿಲಗೊಂಡಿದ್ದು, ನೀರು ಜಿನುಗುತ್ತಿದೆ. ಇದರಿಂದ ನಾಲ್ಕೈದು ದಿನಗಳಿಂದ ಇಲ್ಲಿನ ಶಿಕ್ಷಕರು ಸಮರ್ಪಕವಾಗಿ ಪಾಠ ಪ್ರವಚನ ಕೈಗೊಳ್ಳಲು ಸಾಧ್ಯವಿಲ್ಲದಾಗಿದೆ. ಇದರಿಂದ ಈ ಶಾಲೆಯಲ್ಲಿ ಕೊಠಡಿಗಳದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇನ್ನು ಮಳೆ ಬಂದ ವೇಳೆ ಶಾಲೆಯ ಆವರಣ ನೀರು ನಿಂತು ಕೆರೆಂತಾಗುತ್ತದೆ. ಶಾಲೆಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಿ ಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೆನೆದುಕೊಂಡೇ ಅಡುಗೆ ಮಾಡ್ಬೇಕು: ಇತ್ತ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಛಾವಣಿಯ ಶೀಟ್ ಒಡೆದು ಹೋಗಿದೆ. ಇದರಿಂದ ಮಳೆ ನೀರು ಅಡುಗೆ ಕೋಣೆಯೊಳಗೆ ಸೋರುತ್ತಿದೆ. ಈ ನಡುವೆಯೂ ಇಲ್ಲಿನ ಅಡುಗೆ ಸಿಬ್ಬಂದಿ ಅಡುಗೆ ತಯಾರಿಸಬೇಕಾದ ದುಸ್ಥಿತಿ ಬಂದಿದೆ. ಛಾವಣಿಗೆ ಶೀಟ್ ಅಳವಡಿಸುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಡುಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಕ್ರಮಕೈಗೊಳ್ಳದ ಅಧಿಕಾರಿಗಳು: ಶಾಲೆಯ ಎಲ್ಲ ಕೊಠಡಿಗಳು ಶಿಥಿಲಗೊಂಡಿದ್ದು, ಈ ಕೊಠಡಿಗಳಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಯಾರು ಹೊಣೆ? ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಕೊಠಡಿಗಳನ್ನು ರಿಪೇರಿ ಮಾಡಿಸಬೇಕು. ಇಲ್ಲವೇ ಹೊಸ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಲೆಯ ಎಲ್ಲ ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಜೀವಭಯದಲ್ಲಿ ಮಕ್ಕಳು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಕೊಠಡಿ ಕುಸಿದು ಅನಾಹುತ ಸಂಭವಿಸಿದರೆ ಯಾರು ಹೊಣೆ? ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು. ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು.ಮಲ್ಲೇಶ್ ಶಾಗ್ಯ ಗ್ರಾಮ ಶೈಕ್ಷಣಿಕ ವಲಯದಲ್ಲಿ ದುರಸ್ತಿಗೊಂಡಿರುವ ಶಾಲಾ ಕೊಠಡಿಗಳನ್ನು ರಿಪೇರಿ ಹಾಗೂ ಹೊಸ ಕಟ್ಟಡ ನಿರ್ಮಿಸುವ ಸಂಬಂಧ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಶಾಗ್ಯ ಶಾಲೆಯೂ ಸೇರಿದೆ. ಆದ್ದರಿಂದ ಅನುದಾನ ಬಿಡುಗಡೆಯಾದ ಬಳಿಕ ಹೊಸ ಕೊಠಡಿ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು.ಮಹೇಶ್ಬಿಇಒ ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net