

ಹನೂರು: ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುವಂತೆ ಭಾನುವಾರ ತಾಲೂಕು ಸರ್ಕಾರಿ ನೌಕರರ ಸಂಘದ ಮುಖಂಡರು ಶಾಸಕ ಎಂ.ಆರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಭಾನುವಾರ ಶಾಸಕರನ್ನು ಭೇಟಿಯಾದ ಸಂಘದ ಅಧ್ಯಕ್ಷ ಗುರುಸ್ವಾಮಿ ನೇತೃತ್ವದ ತಂಡ, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ನೂತನ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು. ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನ ಗೊಳಿಸಬೇಕು ಎಂದು ಮನವಿ ಮಾಡಿತು.
ಮನವಿ ಸಲ್ಲಿಸಿದ ಬಳಿಕ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಹಾಗಾಗಿ ನೌಕರರ ಬೇಡಿಕೆಗಳು ಈಡೇರುವವರೆಗೂ ರಾಜ್ಯ ಸಂಘವು ಮುಷ್ಕರ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಮುತುವರ್ಜಿ ವಹಿಸಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸಲು ಸಹಕರಿಸಬೇಕು ಎಂದು ಶಾಸಕರಿಗೆ ವಿನಂತಿಸಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಅಗತ್ಯ ಕ್ರಮವಹಿಸುವೆ ಎಂದು ಭರವಸೆ ನೀಡಿದರು. ಸಂಘದ ಪದಾಧಿಕಾರಿಗಳಾದ ಚಿನ್ನಪ್ಪಯ್ಯ, ಮಾದೇಶ್, ಮಹೇಶ್, ಸಿದ್ದಪ್ಪ, ಗಿರೀಶ್, ಚಂದ್ರಶೇಖರ್, ವೆಂಕಟರಾಜು ಹಾಗೂ ಇನ್ನಿತರರು ಇದ್ದರು.