

ಹನೂರು: ಪಟ್ಟಣದಿಂದ ಕಾಮಗೆರೆ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಅಪಘಾತಗಳು ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲೇ ನಾಲ್ವರು ಬೈಕ್ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರಿಂದ ಈ ಮಾರ್ಗ ‘ಆಕ್ಸಿಡೆಂಟ್ ಜೋನ್’ ಎಂದೇ ಕುಖ್ಯಾತಿಯನ್ನು ಪಡೆದಿದೆ. ಕೊಳ್ಳೇಗಾಲದಿಂದ ಹನೂರಿಗೆ ಸಂಪರ್ಕ ಕಲ್ಪಿಸುವ 23 ಕಿ.ಮೀ. ಅಂತರದ ಈ ರಸ್ತೆ ಸಂಪೂರ್ಣ ಹಾಳಾಗಿತ್ತು. ಇದರಿಂದ ವಾಹನ ಸವಾರರು ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದರು. ಹಾಗಾಗಿ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಶಿಪ್ ಯೋಜನೆಯಡಿ 108 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
ಬಹುತೇಕ ಕೆಲಸಗಳು ಪೂರ್ಣಗೊಂಡಿದೆ. ರಸ್ತೆ ವಿಶಾಲವಾಗಿರುವುದರಿಂದ ವಾಹನಗಳ ವೇಗವೂ ಹೆಚ್ಚಾಗಿದೆ. ಇದರಿಂದ ಮಧುವನಹಳ್ಳಿ, ಚಿಕ್ಕಿಂದುವಾಡಿ, ದೊಡ್ಡಿಂದುವಾಡಿ ಹಾಗೂ ಸಿಂಗಾನಲ್ಲೂರು ಬಳಿ ಕಳೆದ ಒಂದು ವರ್ಷದಿಂದಲೂ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಸಾವು- ನೋವುಗಳು ಹೆಚ್ಚಾಗುತ್ತಲೇ ಇದೆ. ಅದು ಹಾಗಾದರೆ ಕಳೆದ ಒಂದು ತಿಂಗಳಿನಿಂದ ಕಾಮಗೆರೆ- ಹನೂರು ಮಾರ್ಗವೂ ಅಪಘಾತಗಳ ಸರಣಿಯಲ್ಲಿ
ಹೆಚ್ಚಿನ ದಾಖಲೆಗಳನ್ನು ಮಾಡಿ ಕುಖ್ಯಾತಿಗೆ ಪಾತ್ರವಾಗುತ್ತಿದೆ. ಆರ್.ಎಸ್. ದೊಡ್ಡಿಯ ಬಳಿ ಒಬ್ಬರು, ಹುಸುಲುಗುಡ್ಡೆಯ ಬಳಿ ಇಬ್ಬರು ಹಾಗೂ ಕಾಮಗೆರೆಯ ಬಳಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಗಲದ ಬಳಿ ಬೈಕ್-ಸೈಕಲ್ ನಡುವೆ ಡಿಕ್ಕಿಯಾಗಿ ಮೂವರು, ಹುಲುಸುಗುಡ್ಡೆಯ ಬಳಿ ಆಟೋ ಮಗುಚಿ ಐವರು ಸಣ್ಣಪುಟ್ಟ ಅಪಘಾತಗಳಲ್ಲಿ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದ್ದರಿಂದ ಈ ಮಾರ್ಗ ‘ಅಪಘಾತ ವಲಯ’ವಾಗಿ ಮಾರ್ಪಟ್ಟಿದೆ.
ಎಲ್ಲಿ ಹೆಚ್ಚು ಅವಘಡ?
ಕಾಮಗೆರೆ- ಹನೂರು ಮಾರ್ಗ ಹುಲುಸುಗುಡ್ಡೆಯ ಮುಖ್ಯ ರಸ್ತೆಯ ಬಳಿ ಕಣ್ಣೂರು ಗ್ರಾಮಕ್ಕೆ ಅಡ್ಡರಸ್ತೆಯ ಮೂಲಕ ಸಂಪರ್ಕ ಕಲ್ಪಿಸುತ್ತದೆ. ಮುಖ್ಯ ರಸ್ತೆಯು ವಿಶಾಲವಾಗಿರುವುದರಿಂದ ವಾಹನಗಳು ಅದರಲ್ಲೂ ಮಹದೇಶ್ವರ ಬೆಟ್ಟಕ್ಕೆ ಸಂಚರಿಸುವ ವಾಹನಗಳೇ ಹೆಚ್ಚಿರುತ್ತವೆ. ಅಡ್ಡರಸ್ತೆಯ ಮೂಲಕ ಮುಖ್ಯ ರಸ್ತೆಗೆ ಸೇರಿಕೊಳ್ಳುವ ವಾಹನ ಸವಾರರಿಗೆ ಸರಿಯಾಗಿ ಮಾರ್ಗ ಕಾಣಿಸುವುದಿಲ್ಲ. ಇದರಿಂದ ಇಲ್ಲಿ ಆಗಾಗ್ಗೆ ದೊಡ್ಡ ಮಟ್ಟದ ಅಪಘಾತಗಳೂ ಸಂಭವಿಸುತ್ತಿವೆ. ಹುಲುಸುಗುಡ್ಡೆಯಿಂದ ಆರ್.ಎಸ್ ದೊಡ್ಡಿಯವರೆಗೂ ಆಗಾಗ್ಗೆ ಅಪಘಾತಗಳು ನಡೆದ ಉದಾಹರಣೆಗಳೂ ಇವೆ. ಈ ಮಾರ್ಗದ ಗ್ರಾಮಗಳಲ್ಲಿ ಸಾರ್ವಜನಿಕರು ಸಂಚರಿಸಲು ಹಾಗೂ ವಾಹನಗಳು ತಿರುವು ಪಡೆದುಕೊಳ್ಳಲು ತಡೆಗೋಡೆ ಇರುವ ಬಳಿಯೇ ವಾಹನಗಳ ಡಿಕ್ಕಿ ಹೆಚ್ಚಾಗಿರುತ್ತದೆ.
ಕಾರಣವಾದರೂ ಏನು?
ಈ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕೆಲಕಡೆ ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಆಗಾಗ್ಗೆ ಅಪಘಾತವಾಗುತ್ತಿರುವ ಸ್ಥಳದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದೆ. ಆದರೆ ಇಲ್ಲಿ ಸುಕರ‌್ಷತಾ ಕ್ರಮವಾಗಿ ಹಂಪ್ಸ್ ಅಥವಾ ಯಾವುದೇ ಸೂಚನಾ ಫಲಕವನ್ನು ಅಳವಡಿಸಿಲ್ಲ. ಅಪಘಾತಗಳಾಗಲು ಇದು ಒಂದು ಕಾರಣವಾದರೆ, ಗ್ರಾಮಗಳಲ್ಲಿ ತಡೆಗೋಡೆಯ ಬಳಿ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಕಡೆ ಯಾವುದೇ ಸುರಕ್ಷತಾ ನಿಯಮವಿಲ್ಲ. ಇನ್ನು ವಿಶಾಲವಾಗಿರುವ ಈ ರಸ್ತೆಯಲ್ಲಿ ವಾಹನಗಳ ಅತಿಯಾದ ವೇಗ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ.
ಸ್ಥಳೀಯರಲ್ಲಿ ಆತಂಕ: ಹೊರ ಊರು, ಜಿಲ್ಲೆಗಳಿಂದ ಆಗಮಿಸಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ
ಎಲ್ಲೆಲ್ಲಿ ತಿರುವುಗಳಿವೆ, ಗುಂಡಿಗಳಾಗಿವೆ, ಯಾವುದು ಅಪಘಾತ ವಲಯ ಎಂದು ತಿಳಿದಿರುವುದಿಲ್ಲ. ಸ್ಥಳದ ಮಾಹಿತಿಯೂ ಇರುವುದಿಲ್ಲ. ಪರಿಣಾಮ ಅಪಘಾತಗಳು ಆಗುತ್ತವೆ. ಸ್ಥಳೀಯ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸ್ಥಳಗಳ ಬಗ್ಗೆ ಗೊತ್ತು. ಈ ಸ್ಥಳಗಳಿಗೆ ಆಗಮಿಸುತ್ತಿದ್ದಂತೆ ಅವರಲ್ಲಿ ಭಯಭೀತಿ ಅವರಿಸುತ್ತದೆ. ಹಿಂದಿನ ಕಹಿ ಘಟನೆಗಳು ನೆನಪು ಮಾಡುತ್ತವೆ. ಕಾಮಗೆರೆ- ಹನೂರು ಮಾರ್ಗದ ರಸ್ತೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿರುವ ಕೆಶಿಪ್ ಹಾಗೂ ಲೋಕೋಪಯೋಗಿ ಅಧಿಕಾರಿಗಳಾಗಲಿ ಸಾರ್ವಜನಿಕರ, ವಾಹನ ಸವಾರರ ಸುರಕ್ಷತೆ ಬಗ್ಗೆ ಯಾವುದೇ ಕಾಳಜಿ ಇಲ್ಲ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಹೆಚ್ಚು ಅಪಘಾತಗಳು ಸಂಭವಿಸುವ ಕಡೆಗಳಲ್ಲಿ ರಸ್ತೆ ಉಬ್ಬು ನಿರ್ಮಾಣ, ಸೂಚನಾ ಫಲಕಗಳನ್ನು ಅಳವಡಿಸುವ ಕ್ರಮಕ್ಕೆ ಮುಂದಾಗಬೇಕಿದೆ.
ಕಾಮಗೆರೆ- ಹನೂರು ಮಾರ್ಗದಲ್ಲಿ ಅದರಲ್ಲೂ ಮಂಗಲ, ಹುಲುಸುಗುಡ್ಡೆಯಿಂದ ಹನೂರಿಗೆ ಸಾಗುವ ದಾರಿಯಲ್ಲಿ ಆಗಾಗ್ಗೆ ಅಪಘಾತಗಳನ್ನೂ, ಸಾವು- ನೋವುಗಳಾಗುತ್ತಿರುವುದನ್ನೂ ನೋಡಿದ್ದೇವೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಭಯ ಆಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಅಪಘಾತಕ್ಕೆ ಕಡಿವಾಣ ಹಾಕಲು ಮುಂದಾಗಬೇಕು. ಈ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು.ಸಿ. ಪ್ರಭು ಮಂಗಲ ಗ್ರಾಮ ಕಾಮಗೆರೆ- ಹನೂರು ಮಾರ್ಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿಯೂ ಇಲ್ಲಿ ಚಾಲನೆಯಲ್ಲಿದೆ. ಆದ್ದರಿಂದ ಕಾಮಗಾರಿ ಪೂರ್ಣಗೊಂಡ ಬಳಿಕ ತಿರುವು, ಇಳಿಜಾರು ಸ್ಥಳದಲ್ಲಿ ಅಪಘಾತ ವಲಯ ಎಂಬ ಫಲಕ, ಹಂಪ್ಸ್‌ಗಳ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು.ಧರ್ಮೇಂದ್ರ ಡಿವೈಎಸ್ಪಿ, ಕೊಳ್ಳೇಗಾಲ ಉಪ ವಿಭಾಗ