

ಹನೂರು: ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್ ಎಟಿಎಂನಲ್ಲಿ ಬಿಟ್ಟು ಹೋಗಿದ್ದ ಹಣವನ್ನು ಗುರುವಾರ ವಾರಸುದಾರರಿಗೆ ಒಪ್ಪಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಗಾತಪುರ ಗ್ರಾಮದ ತೌಸಿಫ್ ಎಂಬುವರು ಜು.7 ರಂದು ಹಣ ಡ್ರಾ ಮಾಡಲು ಕಾವೇರಿ ಗ್ರಾಮೀಣ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಈ ವೇಳೆ ಗ್ರಾಹಕರೊಬ್ಬರು 5,500 ರೂ. ಎಟಿಎಂನಲ್ಲೇ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಆದರೆ, ಅಂದು ಬ್ಯಾಂಕ್ ರಜೆ ಇದ್ದ ಕಾರಣ ತೌಸಿಫ್ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಎಎಸ್‌ಐ ಶಿವಕುಮಾರ್ ಅವರಿಗೆ ಹಣವನ್ನು ಒಪ್ಪಿಸಿ ಗ್ರಾಹಕರನ್ನು ಪತ್ತೆಹಚ್ಚಿ ಹಣ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆ ಬ್ಯಾಂಕ್‌ಗೆ ತೆರಳಿದ ಪೊಲೀಸರು ಅಧಿಕಾರಿಯಿಂದ ಮಾಹಿತಿ ಪಡೆದು ಹಣ ಬಿಟ್ಟು ಹೋಗಿದ್ದ ತಾಲೂಕಿನ ಅಲಗುಮೂಲೆ ಗ್ರಾಮದ ಮಮತಾ ಎಂಬುವರನ್ನು ಪತ್ತೆಹಚ್ಚಿ ಹಣ ಒಪ್ಪಿಸಿದರು. ಈ ಬಗ್ಗೆ ಮಮತಾ ಪ್ರಶಂಸೆ ವ್ಯಕ್ತಪಡಿಸಿದರು. ಜತೆಗೆ ಪ್ರಮಾಣಿಕತೆ ಮೆರೆದಿದ್ದ ತೌಸಿಫ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.