ಮಕ್ಕಳಲ್ಲಿ ಒಡಮೂಡಿದ ಪರಿಸರ ಪ್ರೇಮ

22kglphoto-1.,,,,
Published on

ಹನೂರು: ಚೆನ್ನಾಗಿ ಓದಿ ಜ್ಞಾನವಂತರಾಗಿ, ಉನ್ನತ ಸ್ಥಾನಮಾನ ಪಡೆದರೆ ಅದು ನಿಮ್ಮ ಕುಟುಂಬ ಹಾಗೂ ಸಮಾಜವನ್ನು ಸಲಹುತ್ತದೆ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜು ಹೇಳಿದರು.

ಹನೂರು ತಾಲೂಕಿನ ಬೈಲೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ತೇಜಸ್ ಸಂಸ್ಥೆ, ಪವನ್ ಸೇವಾ ಟ್ರಸ್ಟ್, ಐಸೆಟ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಜಾಗೃತಿಗಾಗಿ ಚಿತ್ರಕಲೋತ್ಸವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಪುಸ್ತಕಗಳನ್ನು ಆಸಕ್ತಿಯಿಂದ ತಲೆತಗ್ಗಿಸಿ ಓದಿದರೆ, ಅದು ನಿಮ್ಮನ್ನು ಜೀವನವಿಡಿ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಅವರ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು. ಮೊಬೈಲ್ ಪಿಡುಗಿನಿಂದ ದೂರ ಉಳಿದು ಪುಸ್ತಕದ ಪ್ರೇಮಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ. ಇಲ್ಲಿರುವ ಕಾಡಂಚಿನ ಗ್ರಾಮಗಳಿಗೆ ಹಾಗೂ ಮಕ್ಕಳಿಗೆ ಮೂಲಸೌಕರ್ಯ, ಶಿಕ್ಷಣ ಸಿಗಬೇಕೆಂದು ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಹಾಗೂ ಹನೂರು ಕ್ಷೇತ್ರದ ಮಾಜಿ ಶಾಸಕರಾದ ರಾಜುಗೌಡ, ಆರ್.ನರೇಂದ್ರ ಶ್ರಮಿಸಿದ್ದಾರೆ. ಅಂತೆಯೇ, ವಿಜಯವಾಣಿ ಪತ್ರಿಕೆ ಬೈಲೂರಿನಲ್ಲಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕದಿಯಲಾದ ಆಸ್ತಿ ಎಂದರೆ ಅದು ಜ್ಞಾನ. ಅದು ಸಿಗಬೇಕಾದರೆ ಓದಿನಿಂದ ಮಾತ್ರ ಸಾಧ್ಯವಾಗಿದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ಪತ್ರಿಕೆಗಳನ್ನು ಓದಬೇಕು. ಇದರಿಂದ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು. ಈ ಸ್ಪರ್ಧೆಯಲ್ಲಿ ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿ ಪರಿಸರ ಸಂರಕ್ಷಣೆ ಮಹತ್ವ ತಿಳಿದಿದ್ದಾರೆ. ಪರಿಸರದ ಉಳಿವಿಗಾಗಿ ಮಾನವ ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಚಿತ್ರಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಮುಂದೆ ಈ ಮಕ್ಕಳ ಭವಿಷ್ಯ ಹಸಿರಾಗಲಿ ಎಂದು ಹಾರೈಸಿದರು.

ತೇಜಸ್ ಸೇವಾ ಸಂಸ್ಥೆ ಅಧ್ಯಕ್ಷ ರವಿತೇಜ ಮಾತನಾಡಿ, ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲೆ ಸ್ಪರ್ಧೆ ಆಯೋಜನೆ ಮಾಡುತ್ತಿದ್ದೇವೆ. ಜಿಲ್ಲೆಯ ಹತ್ತಾರು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪರಿಸರದ ಅರಿವಿನ ಜತೆಗೆ ಸ್ಪರ್ಧಾತ್ಮಕ ಮನೋಭಾವ ಮೂಡಲು ಉತ್ತೇಜನ ನೀಡುತ್ತಿದ್ದೇವೆ. ಗಡಿ ಜಿಲ್ಲೆಯ ಕಾಡಂಚಿನ ಗ್ರಾಮವಾದ ಬೈಲೂರಿನ ಪ್ರೌಢಶಾಲೆಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ನಡೆಸಿದ್ದೇವೆ. ಅಂತೆಯೇ, ಮಕ್ಕಳು ಲವಲವಿಕೆಯಿಂದ ಪಾಲ್ಗೊಂಡಿದ್ದು, ಶಿಕ್ಷಕ ವರ್ಗವೂ ಸಹಕಾರ ನೀಡಿ ಕಾರ್ಯಕ್ರಮ ಯಶಸ್ಸುಗೊಳಿಸಿದ್ದಾರೆ ಎಂದರು.

ದೃಷ್ಟಿಯೇ ಸೃಷ್ಟಿ
ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ ಮಾತನಾಡಿ, ದಿನಪತ್ರಿಕೆಗಳು ತನ್ನ ಮೌಲ್ಯವನ್ನು ಕಾಯ್ದುಕೊಂಡು ಮತ್ತಷ್ಟೂ ಬೆಳೆಸುತ್ತಿದೆ. ಸಮಾಜದ ಅಂಕುಡೊಂಕು ತಿದ್ದುವುದರ ಜತೆಗೆ, ಪ್ರಚಲಿತ ಸುದ್ದಿ-ಸಮಾಚಾರ ತಿಳಿಸುತ್ತಿದೆ. ಅದರಲ್ಲೂ ವಿಜಯವಾಣಿ ಪತ್ರಿಕೆ ಪರಿಸರ ಅರಿವು ಮೂಡಿಸುವುದರ ಜತೆಗೆ, ಕಾಡಂಚಿನ ಗ್ರಾಮದ ಮಕ್ಕಳನ್ನು ತಲುಪುವ ಕಾಯಕ ಮಾಡಿರುವುದು ಮೆಚ್ಚುವ ಸಂಗತಿ. ದೃಷ್ಟಿಯೇ ಸೃಷ್ಟಿ ಎಂಬಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು, ಪರಿಸರ ರಕ್ಷಣೆ ಹೇಗೆ ಮಾಡಬೇಕು, ಅದರ ಅವಶ್ಯಕತೆ ಎಷ್ಟಿದೆ ಎಂಬುದನ್ನು ಚಿತ್ರಗಳ ಮೂಲಕ ಪ್ರದರ್ಶಿಸಿದ್ದಾರೆ ಎಂದರು.

ಬಹುಮಾನ ವಿತರಣೆ
ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಎಂ.ನಿಸ್ಬಾಖಾನಂ ಮೊದಲನೇ ಬಹುಮಾನ ಪಡೆದು ಕೊಂಡರು. 10ನೇ ತರಗತಿಯ ವಿದ್ಯಾರ್ಥಿನಿ ಎಂ.ಅನಿತಾ 2ನೇ ಬಹುಮಾನ ಹಾಗೂ ಕಾರ್ತಿಕ್ 3ನೇ ಬಹುಮಾನಕ್ಕೆ ಭಾಜನರಾದರು.

ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ ಉಪಯುಕ್ತ:
ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ಮಾತನಾಡಿ, ವಿಜಯವಾಣಿ ಪತ್ರಿಕೆ ಪರೀಕ್ಷೆ ಹಾಗೂ ಉದ್ಯೋಗ ದೃಷ್ಟಿಯಿಂದ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ನೀಡುತ್ತಿದೆ. ನಾವು ಸಹ ನಮ್ಮ ಶಾಲೆಗೆ ತರಿಸಿಕೊಂಡು ಓದುತ್ತಿದ್ದೇವೆ. 10ನೇ ತರಗತಿಗೆ ಬಹಳ ಉಪಯುಕ್ತವಾಗಿದೆ. ಸಾಮಾನ್ಯ ಜ್ಞಾನ, ಉದ್ಯೋಗ ಮಾಹಿತಿ ಎಲ್ಲವನ್ನು ತಿಳಿಯುವ ಅವಕಾಶ ಸಿಕ್ಕಿದೆ ಎಂದರು.
ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವಿ.ವೆಂಕಟೇಶ್, ಹಿರಿಯ ಶಿಕ್ಷಕ ವೆಂಕಟೇಶ್, ಶಿಕ್ಷಕ ರಾಘವೇಂದ್ರ, ಮುಖಂಡರಾದ ಚಿದಾನಂದ, ಮೋಹನ್‌ಕುಮಾರ್, ರವಿ, ಮಾದೇಶ್, ರವಿಕುಮಾರ್ ಇದ್ದರು. ವಿದ್ಯಾರ್ಥಿನಿ ಮಧುಶ್ರೀ ಕಾರ್ಯಕ್ರಮದ ನಿರೂಪಿಸಿದರು.

ಪರಿಸರ ಸಂರಕ್ಷಣೆ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ಚಿತ್ರಿಸಲು ಅವಕಾಶ ಕಲ್ಪಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದ. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ದೊರೆತಿದ್ದು ಖುಷಿ ತಂದಿದೆ.-ಎಂ.ನಿಸ್ಬಾಖಾನಂ, ವಿದ್ಯಾರ್ಥಿನಿ ಗಡಿ ಜಿಲ್ಲೆಯ ಕಾಡಂಚಿನ ಶಾಲೆಯಲ್ಲಿ ಚಿತ್ರಕಲೆ ಏರ್ಪಡಿಸಿದ್ದು ನಿಜಕ್ಕೂ ಸಂತೋಷದ ವಿಚಾರ. ಅದರಲ್ಲೂ ಬಹುಮಾನ ಪಡೆದದ್ದು ಆತ್ಮವಿಶ್ವಾಸ, ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಿಸಿದೆ.-ಎಂ.ಅನಿತಾ ವಿದ್ಯಾರ್ಥಿನಿ ಇದೇ ಮೊದಲು ನಮ್ಮ ಶಾಲೆಯಲ್ಲಿ ಹೊರಗಿನಿಂದ ಬಂದು ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮ ಆಯೋಜಿಸಿರುವುದು. ಇದು ನನಗೆ ಸಿಕ್ಕ ಮೊದಲ ಬಹುಮಾನ.-ಕಾರ್ತಿಕ್, ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net