ಜಲಜೀವನ್ ಮಿಷನ್ ಕಾಮಗಾರಿ ಗುಣಮಟ್ಟ ಕಾಪಾಡಿ

oppo_2
oppo_2
Published on

ಹನೂರು; ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಜನರಿಂದ ದೂರು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಗುರುವಾರ ಜಲ ಜೀವನ್ ಮಿಷನ್ ಯೋಜನೆ ಸಂಬಂಧ ಆಯೋಜಿಸಿದ್ಧ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಪ್ರತಿ ಮನೆಗೂ ನೀರು ಒದಗಿಸುವ ಉದ್ಧೇಶದಿಂದ ಜೆಜೆಎಂ ವತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವು ಗ್ರಾಮಗಳಲ್ಲಿ ಪೈಪ್‌ಲೈನ್‌ಗಾಗಿ ರಸ್ತೆ ಕೊರೆಯಲಾಗುತ್ತದೆ. ಬಳಿಕ ಕೊರೆದ ರಸ್ತೆಯನ್ನು ಕಾಂಕ್ರಿಟ್‌ನಿಂದ ಸಮರ್ಪಕವಾಗಿ ತೇಪೆ ಹಾಕುತ್ತಿಲ್ಲ ಎಂಬುದಾಗಿ ಜನರಿಂದ ದೂರು ಬಂದಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮರು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ. ಜತೆಗೆ ಕೆಲವು ಗ್ರಾಮಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಗುತ್ತಿಗೆದಾರರಿಂದಲೇ ಪೂರ್ಣಗೊಳಿಸುವ ನಿಗಧಿತ ದಿನಾಂಕವನ್ನು ಪಡೆದು ವರದಿ ನೀಡಬೇಕು. ಒಂದು ವೇಳೆ ಆ ದಿನಾಂಕದೊಳಗೆ ಕಾಮಗಾರಿ ಪೂರ್ಣವಾಗದಿದ್ದಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಮುಂದಿನ ಕ್ರಮಕೈಗೊಳ್ಳಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು ಎಂದು ತಾಕೀತು ಮಾಡಿದರು.

ರಸ್ತೆ ನಿರ್ಮಾಣಕ್ಕೆ ಕ್ರಮ: ಇದೇ ವೇಳೆ ಗುತ್ತಿಗೆದಾರರೊಬ್ಬರೂ ತಾಲೂಕಿನ ಮ.ಬೆಟ್ಟ ಗ್ರಾಪಂ ವ್ಯಾಪ್ತಿಯ ದೊಡ್ಡಾಣೆ, ಕೊಕ್ಕಬರೆ ಹಾಗೂ ತೋಕರೆ ಗ್ರಾಮದಲ್ಲಿ ಶೇ.90ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ರಸ್ತೆಯ ಕೊರತೆಯಿಂದ ಬೋರ್ ಕೊರೆಯುವ ಲಾರಿ ಸಂಚರಿಸಲು ಸಾಧ್ಯವಿಲ್ಲದ ಪರಿಣಾಮ ಕೊಳವೆ ಬಾವಿ ಕೊರೆಯಲು ಸಾಧ್ಯವಾಗಿಲ್ಲ. ಹಾಗಾಗಿ ಕಾಮಗಾರಿ ಬಾಕಿ ಉಳಿದಿದೆ ಎಂದು ತಿಳಿಸಿದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಈಗಾಗಲೇ ಪಿಡಬ್ಲುೃಡಿ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗಿದ್ದು, ಸರ್ಕಾರದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ರಸ್ತೆಯಾಗಲಿದೆ ಎಂದು ತಿಳಿಸಿದರು. ಇನ್ನು ರಾಮಾಪುರ ಹೋಬಳಿ ವ್ಯಾಪ್ತಿಯ ಕಕ್ಕೊಹೊಲ, ಮರೂರು, ಇಂಡಿಗನತ್ತ, ತೊಳಸಿಕೆರೆ, ವಿ.ಎಸ್.ದೊಡ್ಡಿ ಹಾಗೂ ಇನ್ನಿತರ ಕೆಲವು ಗ್ರಾಮಗಳಲ್ಲಿ ಓವರ್‌ಹೆಡ್ ನಿರ್ಮಿಸಲು ಜಾಗದ ಕೊರತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಶಾಸಕರು ಆರ್‌ಐ ಶಿವಕುಮಾರ್ ಅವರಿಗೆ ಓವರ್‌ಹೆಡ್ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಗುರುತಿಸಿ ಕೊಡುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜೆಜೆಎಂ ಎಇಇ ಹರೀಶ್, ಇಂಜಿನಿಯರ್‌ಗಳಾದ ಪೂರ್ಣಿಮಾ, ಮಹೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net