ಅಕ್ರಮದ ತನಿಖೆ ನಡೆಸುವಂತೆ ಆಗ್ರಹ

oppo_2
oppo_2
Published on

ಹನೂರು: ಹಾಲು ಉತ್ಪಾದಕರ ಸಂಘದಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿ ಗುರುವಾರ ರೈತರು ಹಾಗೂ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತಾಲೂಕಿನ ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗ ಜಮಾವಣೆಗೊಂಡಿದ್ದ ರೈತರು, ಹಾಲು ಉತ್ಪಾದಕರ ಸಂಘದಲ್ಲಿ ಐದು ವರ್ಷಗಳಿಂದ 5 ಸುಮಾರು 54 ಲಕ್ಷ ರೂ. ಅವ್ಯವಹಾರ ನಡೆದಿದೆ. ಈ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಹಾಲು ಉತ್ಪಾದಕ ಸಂಘದ ಮುಖಂಡ ಚಾರ್ಲಾಸು ಮಾತನಾಡಿ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮದಲೈಮುತ್ತು ಅವರಿಗೆ 60 ವರ್ಷ ತುಂಬಿದೆ. ವಯೋಮಾನದ ಪ್ರಕಾರ ನಿವೃತ್ತಿ ಹೊಂದಬೇಕು. ಆದರೆ, ನಿವೃತ್ತಿಯಾಗದ ಅವರು ಇನ್ನೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೆಲ್ಲವೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದೆ. ಹಾಗಾಗಿ, ನಿಯಮದ ಪ್ರಕಾರವೇ ಸಂಘ ಕಾರ್ಯನಿರ್ವಹಿಸಬೇಕು. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ರಾಜಕಣ್ಣ ಅವರು ಚಾಮುಲ್ ನಿರ್ದೇಶಕರಾದ ಶಾಹುಲ್ ಆಹಮದ್ ಹಾಗೂ ಉದ್ದನೂರು ಪ್ರಸಾದ್ ಸಮ್ಮುಖದಲ್ಲಿ ತನಿಖೆಯಾಗುವವರೆಗೂ ಕಾರ್ಯದರ್ಶಿಯನ್ನು ನಿವೃತ್ತಿಗೊಳಿಸುವುದಿಲ್ಲ. ತನಿಖೆಗೆ ಸಹಕರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೇ ವೇಳೆ ಪ್ರತಿಭಟನಾಕಾರರ ವಿರುದ್ಧ ಮತ್ತೊಂದು ಗುಂಪು ಆಗಮಿಸಿದ್ದವರನ್ನು ಪೊಲೀಸರು ನಿಯಂತ್ರಿಸಿದರು.

ಒತ್ತಾಯ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೋಸ್ಕೋ ಮಾತನಾಡಿ, ಹಾಲು ಉತ್ಪಾದಕರು ಸರಬರಾಜು ಮಾಡುವ ಹಾಲಿನ ಹಣವು ನೇರವಾಗಿ ಅವರ ಖಾತೆಗೆ ಜಮೆಯಾಗಬೇಕು. ಗುರುತಿನ ಚೀಟಿಯನ್ನು ನೀಡಬೇಕು. ಜತೆಗೆ ಸಿಸಿ ಕ್ಯಾಮರಾವನ್ನು ಅಳವಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net