

ಹನೂರು: ರಾಜ್ಯದಲ್ಲಿ ಎಲ್ಲೆಡೆ ಡೆಂಘೆ ಅರ್ಭಟಿಸುತ್ತಿದೆ. ಇದರ ತಡೆಗೆ ಆರೋಗ್ಯ ಇಲಾಖೆ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವಂತೆ ಎಚ್ಚರಿಕೆಯನ್ನೂ ವಹಿಸುತ್ತಿದೆ. ಆದರೆ ಹನೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಚರಂಡಿಯಲ್ಲಿ ಹೂಳು ಹಾಗೂ ಕಸದ ರಾಶಿ ತುಂಬಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ಜನರಲ್ಲಿ ಡೆಂಘೆ ಹರಡುವ ಆತಂಕ ಹೆಚ್ಚಾಗಿದೆ.
ಡೆಂಘೆ ಜ್ವರವು ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವ ಈಡೀಸ್ ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮನೆಗಳಲ್ಲಿ ನೀರು ಸಂಗ್ರಹವಾಗುವ ತೊಟ್ಟಿ, ಡ್ರಮ್, ತೆಂಗಿನಕಾಯಿ ಚಿಪ್ಪು, ಪ್ಲಾಸ್ಟಿಕ್ ಬಾಟಲಿ, ಲೋಟ, ಟಯರ್, ಬಕೆಟ್ ಇನ್ನಿತರ ವಸ್ತುಗಳಲ್ಲಿ ಈಡೀಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಡೆಂಘೆಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹಾಗಾಗಿ ಸೊಳ್ಳೆಗಳ ಸಾಂದ್ರತೆ ಕಡಿಮೆ ಮಾಡುವುದರಿಂದ ಮಾತ್ರ ಈ ರೋಗವನ್ನು ನಿಯಂತ್ರಿಸಬಹುದು. ಈ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದೆ.
ಒಣದಿನ ಆಚರಿಸಲು ಹಿಂದೇಟು
ಡೆಂಘೆ ತಡೆಗಟ್ಟುವ ಸಂಬಂಧ ಈಗಾಗಲೇ ಹಲವು ತರಬೇತಿ ಶಿಬಿರಗಳು, ಜಾಗೃತಿ ಜಾಥಾಗಳು ನಡೆದಿವೆ. ಗ್ರಾಮಗಳಲ್ಲಿ ವಾರದಲ್ಲಿ ಒಂದು ದಿನ ‘ನೀರು ಸಂಗ್ರಹವಾಗುವ ವಸ್ತುಗಳನ್ನು ಸ್ವಚ್ಛಗೊಳಿಸುವ ಕಾರ್ಯ’(ಒಣದಿನ-ಡ್ರೈ ಡೇ) ನೆರವೇರಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಆದರೆ ಒಣದಿನವನ್ನು ಆಚರಿಸಬೇಕಾದರೆ ಮಾರನೇ ದಿನ ಕಡ್ಡಾಯವಾಗಿ ಗ್ರಾಮಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಾಗಿದೆ. ಈ ಕಾರ್ಯಕ್ಕೆ ತೊಡಕು ಅನೇಕ ಇವೆ. ಹಾಗಾಗಿ ಪಿಡಿಒಗಳು ಒಣದಿನ ಆಚರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವಿದೆ.
ಹನೂರು ಪಟ್ಟಣದಲ್ಲೂ ಸ್ವಚ್ಛತೆಯಿಲ್ಲ
ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿವೆ. ಆದರೆ ಬಹುತೇಕ ಕಡೆಗಳಲ್ಲಿ ಕಸದ ರಾಶಿ ತಾಂಡವವಾಡುತ್ತಿದೆ. ಕೆಲ ಬಡಾವಣೆಯಲ್ಲಿ ಚರಂಡಿ ಸ್ವಚ್ಛಗೊಳಿಸಿಲ್ಲ. ಜತೆಗೆ ಪಪಂ ಕಚೇರಿಯ ತಳಭಾಗದಲ್ಲಿ ಸಾರ್ವಜನಿಕ ಶೌಚಗೃಹದ ಮಲ, ಮೂತ್ರಗಳ ಮಲಿನ ನೀರು ಮಡುಗಟ್ಟಿ ನಿಂತಿದೆ. ಇದರಿಂದ ಪಟ್ಟಣದಲ್ಲೂ ಅಶುಚಿತ್ವ ತಾಂಡವಾಡುತ್ತಿದೆ. ಸೊಳ್ಳೆಗಳ ಉತ್ಪತ್ತಿಗೆ ಇದು ಕಾರಣವಾಗಿದೆ. ಆದರೆ ಇಲ್ಲಿನ ಅಧಿಕಾರಿಗಳು ಡೆಂಘೆ ನಿಯಂತ್ರಣ ಪ್ರಚಾರಕ್ಕಷ್ಟೇ ಸೀಮಿತವಾಗಿದೆ ಎನ್ನಲಾಗುತ್ತಿದೆ. ಕಸವನ್ನು ತೆರವುಗೊಳಿಸುವಲ್ಲಿ ಪೌರ ಕಾರ್ಮಿಕರು ನಿರ್ಲಕ್ಷ್ಯ ವಹಿಸಿರುವುದಕ್ಕೆ ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಯೇ ಸಾಕ್ಷಿಯಾಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚರಂಡಿಯಲ್ಲಿ ತುಂಬಿರುವ ಹೂಳು ಹಾಗೂ ಬಿದ್ದಿರುವ ಕಸದ ರಾಶಿಯನ್ನು ತೆರವುಗೊಳಿಸುವ ಮೂಲಕ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಡೆಂಘೆ ಬಾರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಬೇಕಿದೆ.
ತಾಲೂಕಿನಲ್ಲಿ ಈಗಾಗಲೇ 6 ಡೆಂಘೆ ಪ್ರಕರಣ ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ.ರಾಜೇಶ್ ಕುಮಾರ್, ಮೈಸೂರು ವಿಭಾಗೀಯ ಕೀಟ ಶಾಸ್ತ್ರಜ್ಞೆ ಡಾ. ರೇಖಾ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಇವರ ತಂಡ ಜಿಪಂ ಸಿಇಒ ಸೂಚನೆ ಮೇರೆಗೆ ಡೆಂಘೆ ನಿರ್ಮೂಲನೆ ಸಂಬಂಧ ಈಗಾಗಲೇ ತಾಲೂಕಿನ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ತರಬೇತಿಯನ್ನೂ ನೀಡಿದೆ. ಗ್ರಾಮಗಳಲ್ಲಿ ಜನರಿಗೆ ಆರೋಗ್ಯ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಡೆಂಘೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವಂತೆ, ಚರಂಡಿ ಹೂಳು ಹಾಗೂ ಬಿದ್ದಿರುವ ಕಸದ ರಾಶಿಯನ್ನು ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಕಾರ್ಯ ತಾಲೂಕಿನ 25 ಗ್ರಾಪಂಗಳ ಪೈಕಿ ಕೆಲವು ಗ್ರಾಪಂಗಳಲ್ಲಿ ಮಾತ್ರ ಅನುಷ್ಠಾನಕ್ಕೆ ಬಂದಿದೆ. ಆದರೆ ಇನ್ನುಳಿದ ಗ್ರಾಪಂಗಳಲ್ಲಿ ಚರಂಡಿಯಲ್ಲಿ ಹೂಳು ತುಂಬಿದೆ. ಕಸದ ರಾಶಿ ಅಲ್ಲಲ್ಲಿ ಬಿದ್ದಿದೆ. ಇದರಿಂದ ಅನೈರ್ಮಲ್ಯ ಮನೆ ಮಾಡಿದೆ. ಸೊಳ್ಳೆಗಳು ಹೆಚ್ಚಾಗಲು, ಡೆಂಘೆ ಹರಡಲು ಇದೇ ಮೂಲ ಕಾರಣವಾಗಿದೆ. ಇದರಿಂದ ಜನರು ರೋಗರುಜಿನಗಳ ಭೀತಿ ಕಾಡುತ್ತಿರುವುದು ಒಂದೆಡೆಯಾದರೆ ಇದೀಗ ಆರ್ಭಟಿಸುತ್ತಿರುವ ಡೆಂಘೆಗೆ ಬಲಿಯಾಗುವ ಆತಂಕಕ್ಕೆ ಒಳಗಾಗಿದ್ದಾರೆ. ಆದರೂ ಚರಂಡಿಯಲ್ಲಿ ತುಂಬಿರುವ ಹೂಳು ಹಾಗೂ ಬಿದ್ದಿರುವ ಕಸದ ರಾಶಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ರಾಜ್ಯದ ಎಲ್ಲೆಡೆ ಜನರಲ್ಲಿ ಡೆಂಘೆ ಆತಂಕ ಶುರುವಾಗಿದೆ. ಹಾಗಾಗಿ ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ ಕೌದಳ್ಳಿ ಗ್ರಾಮದ ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ. ಜತೆಗೆ ಕೆಲವೆಡೆ ಚರಂಡಿಯಲ್ಲಿ ಹೂಳು ತುಂಬಿದೆ. ತ್ಯಾಜ್ಯ ನೀರು ಮಡುಗಟ್ಟಿ ನಿಂತಿದೆ. ಇದರಿಂದ ಸ್ವಚ್ಛತೆ ಇಲ್ಲವಾಗಿದೆ. ಸೊಳ್ಳೆಗಳ ಉತ್ಪತ್ತಿಗೆ ಇದು ಕಾರಣವಾಗಿದೆ. ಡೆಂಘೆ ಆತಂಕ ಮನೆ ಮಾಡಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಡೆಂಘೆ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ.ನೂರುಲ್ಲಾ, ನಾಗರಿಕ ಕೌದಳ್ಳಿ ಗ್ರಾಮ ಹನೂರಿನ ಸಾರ್ವಜನಿಕ ಶೌಚಗೃಹದ ಹಿಂಭಾಗದಲ್ಲಿ ಮಲ, ಮೂತ್ರಗಳ ಮಲಿನ ನೀರು ಮಡುಗಟ್ಟಿ ನಿಂತಿದೆ. ಇದು ದುರ್ವಾಸನೆ ಬೀರುತ್ತಿದೆ. ಇದರಿಂದ ಸೊಳ್ಳೆಗಳು ವಿಪರೀತವಾಗಿದೆ. ಇನ್ನು ಕೆಲವು ಬಡಾವಣೆಗಳಲ್ಲಿ ಕಸದ ರಾಶಿ ಬಿದ್ದಿದೆ. ಇದೀಗ ಡೆಂಘೆ ಅರ್ಭಟ ಹೆಚ್ಚುತ್ತಿರುವ ಸಮಯಯಲ್ಲಿ ಪಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸ್ವಚ್ಛತೆ ಕಾಪಾಡಬೇಕಿದೆ.ನಂದೀಶ್ಹನೂರು ನಿವಾಸಿ ಹನೂರು ತಾಲೂಕಿನ ಕೆಲವು ಗ್ರಾಮದ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಯನ್ನು ಶೀಘ್ರ ತೆರವುಗೊಳಿಸುವಂತೆ ಸಂಬಂಧಪಟ್ಟ ಪಿಡಿಒಗಳಿಗೆ ಸೂಚಿಸಲಾಗುವುದು. ಜತೆಗೆ ಡೆಂಘೆ ತಡೆಗಟ್ಟುವ ಸಂಬಂಧ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಗುವುದು.ಉಮೇಶ್ಇಒ, ತಾಲೂಕು ಪಂಚಾಯಿತಿ, ಹನೂರು ಡೆಂಘೆ ನಿಯಂತ್ರಣದ ಸಂಬಂಧ ಈಗಾಗಲೇ ಶಿಕ್ಷಕರು ಹಾಗೂ ಪಿಡಿಒಗಳಿಗೆ ತರಬೇತಿ ನೀಡಲಾಗಿದೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಜನರಲ್ಲಿ ಅರಿವು ಮೂಡಿಸುವಂತೆ ತಿಳಿಸಲಾಗಿದೆ. ಒಣ ದಿನ ಆಚರಿಸುವ ಸಂಬಂಧ ಪಿಡಿಒಗಳ ಜತೆ ಸಭೆ ನಡೆಸಿ ನಿರ್ಧರಿಸಲಾಗುವುದು.ಡಾ.ಪ್ರಕಾಶ್ತಾಲೂಕು ಆರೋಗ್ಯಾಧಿಕಾರಿ, ಹನೂರು