

ಹನೂರು; ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಜನರಲ್ಲಿ ಡೆಂಘೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಡೆಂಘೆ ತಡೆಗಟ್ಟುವ ಸಂಬಂಧ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಡೆಂಘೆ ಈಡಿಸ್ ಸೊಳ್ಳೆಯ ವೈರಾಣುವಿನಿಂದ ಹರಡುವಂತಹ ರೋಗವಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ರಾಜ್ಯದಲ್ಲಿ ದಿನೇ ದಿನೆ ಡೆಂಘೆ ಪ್ರಕರಣಗಳು ಹೆಚಾಗುತ್ತಿದ್ದು, ಜನರಲ್ಲಿ ಆತಂಕ ಉಂಟು ಮಾಡುತ್ತಿದೆ. ಆದ್ದರಿಂದ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಚರಂಡಿಗಳು ಸ್ವಚ್ಛವಾಗಿಟ್ಟುಕೊಳ್ಳುವಂತೆ, ಕಸದ ರಾಶಿ ಬೀಳದಂತೆ ಹಾಗೂ ಮನೆಯ ಸುತ್ತಮುತ್ತಲಿನ ವಾತಾವರಣ ನೈರ್ಮಲ್ಯದಿಂದ ಕೂಡಿರುವಂತೆ ಜನರಲ್ಲಿ ಅರಿವು ಮೂಡಿಸಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಇದರಿಂದ ಡೆಂಘೆ ತಡೆಗಟ್ಟಬಹುದು ಎಂದು ತಿಳಿಸಿದರು. ತಾಪಂ ಇಒ ಉಮೇಶ್, ಪಿಡಿಒಗಳಾದ ಮಹದೇವಪ್ರಭು, ಮಾದೇಶ್, ನಂಜುಂಡಸ್ವಾಮಿ, ಗಂಗಾಧರ್, ದೊರೆಯಾ, ಸೆಲ್ವರಾಜ್ ಹಾಗೂ ಇನ್ನಿತರರು ಇದ್ದರು.