

ಹನೂರು: ತಾಲೂಕಿನ ಮಂಗಲ ಸಮೀಪದ ಹುಲುಸುಗುಡ್ಡೆಯಲ್ಲಿ ಕಣ್ಣೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಯ ಬಳಿಯ ಒಂದೇ ಸ್ಥಳದಲ್ಲಿ ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಪ್ರತ್ಯೇಕ ಎರಡು ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರ ಗಾಯಗೊಂಡಿದ್ದಾರೆ.
ಹನೂರಿನ ಗೋವಿಂದ (60) ಹಾಗೂ ಭೈರನತ್ತ ಗ್ರಾಮದ ಮಹದೇವಪ್ಪ (70) ಗಾಯಗೊಂಡವರು.
ಗೋವಿಂದ ಎಂಬುವರು ಕಾರ್ಯನಿಮಿತ್ತ ಕಣ್ಣೂರಿಗೆ ತೆರಳಿ ಬೈಕ್‌ನಲ್ಲಿ ಊರಿಗೆ ವಾಪಾಸಾಗುತ್ತಿದ್ದರು. ಈ ವೇಳೆ ಅಡ್ಡರಸ್ತೆಯ ಬಳಿಯ ಮ.ಬೆಟ್ಟ ಮುಖ್ಯರಸ್ತೆಯಲ್ಲಿ ಎದುರು ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕೂಡಲೇ 112 ವಾಹನದ ಸಿಬ್ಬಂದಿ ಗಾಯಾಳುವನ್ನು ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಗಾಯಾಳು ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಇದೇ ಸ್ಥಳದಲ್ಲಿ ಬೆಳಗ್ಗೆ 11.30ರಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೈರನತ್ತ ಗ್ರಾಮದ ಮಹದೇವಪ್ಪ ಅವರ ಕಾಲು ಮುರಿದಿದೆ. ಮಹದೇವಪ್ಪ ಜಿ.ಕೆ. ಹೊಸೂರು ಗ್ರಾಮದಲ್ಲಿ ಮಗಳ ಮನೆಗೆ ತೆರಳಿ ಗ್ರಾಮಕ್ಕೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಮ.ಬೆಟ್ಟದಿಂದ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದೆ. ಇನ್ನು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದ ಕಾರಿನಲ್ಲಿದ್ದ ಬೆಂಗಳೂರಿನ ಚೋಳೂರು ಪಾಳ್ಯದ 6 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎರಡೂ ಘಟನೆಗಳ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.