

ಹನೂರು: ಪಟ್ಟಣದ ಮೈಸೂರು ಮಾರಮ್ಮ ದೇಗುಲ ರಸ್ತೆಯಲ್ಲಿದ್ದ ತಾಲೂಕು ಪಂಚಾಯಿತಿ ಕಚೇರಿಯನ್ನು ಬಂಡಳ್ಳಿ ರಸ್ತೆಯಲ್ಲಿನ ಕ್ರಿಸ್ತರಾಜ ಶಾಲಾ ಮುಂಭಾಗದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ ಗುರುವಾರ ಉದ್ಘಾಟಿಸಿದರು.
2020ರಲ್ಲಿ ಪಟ್ಟಣದ ಮೈಸೂರು ಮಾರಮ್ಮನ ದೇಗುಲಕ್ಕೆ ತೆರಳುವ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡದ ಮೇಲಂತಸ್ತಿನಲ್ಲಿ ಕಚೇರಿಯನ್ನು ಆರಂಭಿಸಲಾಯಿತು. ಆದರೆ ಈ ಕಟ್ಟಡದಲ್ಲಿ ಅಧಿಕಾರಿಗಳು ಹಾಗೂ ನೌಕರರು ಆಯಕಟ್ಟಿನಲ್ಲಿ ಕುಳಿತು ಕಾರ್ಯನಿರ್ವಹಿಸಲು ಪ್ರತ್ಯೇಕ ಕೊಠಡಿ ಅಥವಾ ಕೌಂಟರ್ ವ್ಯವಸ್ಥೆ ಇರಲಿಲ್ಲ. ಜತೆಗೆ ಕಚೇರಿ ಮೇಲಂತಸ್ತಿನಲ್ಲಿದ್ದರಿಂದ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೆಟ್ಟಿಲನ್ನು ಹತ್ತಿ, ಇಳಿಯುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಅದರಲ್ಲೂ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸುವ ಅಂಗವಿಕಲರು, ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಇನ್ನು ವಾಹನಗಳ ಪಾರ್ಕಿಂಗ್ ಸಮಸ್ಯೆಯೂ ಇತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಜ.29ರ ವಿಜಯವಾಣಿ ಸಂಚಿಕೆಯಲ್ಲಿ ಹನೂರು ತಾಪಂಗಿಲ್ಲ ಸ್ವಂತ ಕಟ್ಟಡ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕ್ರಮವಹಿಸಿದ್ದರು. ಇದರ ಪರಿಣಾಮ ಹುಲ್ಲೇಪುರದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಮಂಜೂರಾಗಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಸ್ವಂತ ಕಟ್ಟಡ ನಿರ್ಮಾಣವಾಗುವ ತನಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಂಡಳ್ಳಿ ರಸ್ತೆಯಲ್ಲಿನ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಿದ್ದು, ಗುರುವಾರ ಉದ್ಘಾಟಿಸಲಾಯಿತು. ಇದರಿಂದ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ:
ಈ ಸಂಬಂಧ ವಿಜಯವಾಣಿಯೊಂದಿಗೆ ಮಾತನಾಡಿದ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಈ ಹಿಂದೆ ಇದ್ದ ಕಚೇರಿಯು ಮೇಲಂತಸ್ತಿನಲ್ಲಿತ್ತು. ಜತೆಗೆ ಮೂಲ ಸೌಕರ್ಯಗಳ ಕೊರತೆ ಇತ್ತು. ಇದರಿಂದ ಕಚೇರಿಗೆ ಆಗಮಿಸುವ ಅಂಗವಿಕಲರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಕಚೇರಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರಾಗಿದ್ದು, ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾಗಬೇಕಿದೆಯಷ್ಟೇ. ಈ ಕಾರ್ಯ 3-4 ತಿಂಗಳೊಳಗೆ ಆಗಲಿದೆ. ಬಳಿಕ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ತಾಪಂ ಇಒ ಉಮೇಶ್, ಸಹಾಯಕ ನಿರ್ದೇಶಕ ರವೀಂದ್ರ, ತಾಲೂಕು ದೈಹಿಕ ಶಿಕ್ಷನ ಪರಿವೀಕ್ಷಕ ಮಹಾದೇವ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಪಿಡಿಒಗಳಾದ ನಂಜುಂಡಸ್ವಾಮಿ, ಮಹದೇವಪ್ರಭು, ಮಾದೇಶ್, ರಾಮು, ಗಂಗಾಧರ್ ಹಾಗೂ ಕಚೇರಿ ಸಿಬ್ಬಂದಿ ಇದ್ದರು.