ಹನೂರು; ತಾಲೂಕಿನ ಗಡಿ ಗ್ರಾಮ ಗೋಪಿನಾಥಂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಶಾಲೆಯಲ್ಲಿ ತಮಿಳು, ಇಂಗ್ಲಿಷ್ ಹಾಗೂ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಪ್ರಸ್ತುತ 1 ರಿಂದ 8ನೇ ತರಗತಿವರೆಗೆ 210 ವಿದ್ಯಾರ್ಥಿಗಳಿದ್ದಾರೆ. ಆದರೆ ಇಲ್ಲಿ ಮೂವರು ಶಿಕ್ಷಕಿಯರು ಸೇರಿದಂತೆ ಐವರು ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಇದರಿಂದ ಪಾಠ ಪ್ರವಚನಗಳಿಗೆ ತೊಡಕಾಗಿ ಪರಿಣಮಿಸಿದ್ದು, ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಿ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮದ ವೀರಮಣಿ ಒತ್ತಾಯಿಸಿದ್ದಾರೆ.