

ಹನೂರು: ಹದಗೆಟ್ಟ ರಸ್ತೆಯಿಂದಾಗಿ ಅಪಘಾತಗಳಾಗುತ್ತಿವೆ, ನಿಗದಿತ ವೇಳೆಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ, ಲೊಕ್ಕನಹಳ್ಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ, ಬರ ಪರಿಹಾರ ಹಣ ಕೆಲವರಿಗೆ ಬಂದಿಲ್ಲ, ಕೆರೆಗಳಲ್ಲಿ ಹೂಳೆತ್ತದ ಪರಿಣಾಮ ನೀರು ಶೇಖರಣೆಯಾಗುತ್ತಿಲ್ಲ…
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದ ಪ್ರಮುಖ ಸಮಸ್ಯೆಗಳು ಇವು. ಭಾರತೀಯ ಕಿಸಾನ್ ಸಂಘದ ಪ್ರಾಂತೀಯ ಅಧ್ಯಕ್ಷ ರಾಜೇಂದ್ರ ಮಾತನಾಡಿ, ತಾಲೂಕಿನ ರಾಮಾಪುರ ಹಾಗೂ ಬಂಡಳ್ಳಿ ಮಾರ್ಗದ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಇದರಿಂದ ಬೈಕ್ ಸವಾರರು ಆಗಾಗ್ಗೆ ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಜತೆಗೆ ಸಾವು-ನೋವು ಸಂಭವಿಸುತ್ತಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಕ್ಷೇತ್ರದ ಜನರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸಪಡಬೇಕಿದೆ. ಇದರಿಂದ ಬೇಸತ್ತ ಸಾರ್ವಜನಿಕರೇ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿಸಿರುವುದು ಪಿಡಬ್ಲುೃಡಿ ಇಲಾಖೆಯ ಅಧಿಕಾರಿಗಳಿಗೆ ನಾಚಿಗೇಡಿನ ಸಂಗತಿ ಎಂದು ಆಕ್ರೋಶಪಡಿಸಿದರು.
ಇದಕ್ಕೆ ದನಿಗೂಡಿಸಿದ ಕೂಡಲೂರಿನ ವೆಂಕಟಾಚಲ, ಹದಗೆಟ್ಟಿರುವ ರಾಮಾಪುರ -ನಾಲ್‌ರೋಡ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯದೆ ಭೂಮಿಪೂಜೆ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದಾಗ, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಗುವುದು ಎಂದು ಪಿಡಬ್ಲುೃಡಿ ಕೊಳ್ಳೇಗಾಲ ವಿಭಾಗದ ಎಇಇ ಪುರುಷೋತ್ತಮ್ ತಿಳಿಸಿದರು.
ಡಿಪೋ ಆರಂಭಕ್ಕೆ ಒತ್ತಾಯ
ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಹನೂರು ಭಾಗದ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸದ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ನಿಗದಿತ ವೇಳೆಗೆ ಬಸ್ ಬಾರದಿರುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕಾಯಬೇಕಿದೆ. ಆದ್ದರಿಂದ ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು. ಜತೆಗೆ ಡಿಪೋ ಆರಂಭಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕ ವೆಂಕಟರಮಣ ಸ್ವಾಮಿ ಪ್ರತಿಕ್ರಿಯಿಸಿ, ಅಗತ್ಯ ಬಸ್ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.
ಕಾಡಾನೆಗಳ ಹಾವಳಿ ತಪ್ಪಿಸಿ
ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಲೊಕ್ಕನಹಳ್ಳಿ ಭಾಗದಲ್ಲಿ ಕಾಡಾನೆಗಳು ಜಮೀನುಗಳಿಗೆ ಲಗ್ಗೆಯಿಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಕಾಡಾನೆಗಳ ಹಾವಳಿ ತಡುಗಟ್ಟುವಂತೆ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಜತೆಗೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳುವುದರ ಜತೆಗೆ ಕಾಡಾನೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹನೂರು ಬಪರ್ ವಲಯದ ಆರ್‌ಎಫ್‌ಒ ಪ್ರವೀಣ್, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕೆರೆಗಳಲ್ಲಿ ಹೂಳೆತ್ತದ ಪರಿಣಾಮ ನೀರು ಸಂಗ್ರಹಣೆಗೆ ತೊಂದರೆಯಾಗಿದೆ. ಬರ ಪರಿಹಾರದ ಹಣ ಕೆಲವರಿಗೆ ಬಂದಿದ್ದು, ಇನ್ನೂ ಕೆಲವರಿಗೆ ಬಂದಿಲ್ಲ. ಪಿ.ಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಟಿಕೆಟ್ ನೀಡುತ್ತಿಲ್ಲ. ಕೃಷಿ ಹಾಗೂ ತೋಟಗಾರಿಗೆ ಇಲಾಖೆಯಿಂದ ರೈತರಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳಿಗೆ ಕುರಿತು ರೈತರು ಸಭೆಯ ಗಮನ ಸೆಳೆದರು. ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಈ ಸಂಬಂಧ ಆಯಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಧನಂಜಯ, ಉಪ ತಹಸೀಲ್ದಾರ್ ಸುರೇಖಾ, ತಾಪಂ ಇಒ ಉಮೇಶ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ, ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಮಹಾದೇವ, ತೋಟಗಾರಿಕೆ ನಿರ್ದೇಶಕಿ ವಿನುತಾ, ಪಿಡಬ್ಲುೃಡಿ ಎಇಇ ಸುರೇಂದ್ರ, ಸೆಸ್ಕ್ ಎಇಇ ಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಇತರರು ಇದ್ದರು.