

ಹನೂರು: ಕಾಡಿನಿಂದ ಶಾಲಾ ಆವರಣಕ್ಕೆ ಆಗಮಿಸಿದ ಜಿಂಕೆಯನ್ನು ಮಂಗಳವಾರ ತಾಲೂಕಿನ ಚನ್ನಾಲಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಕ್ಷಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಶಾಲೆಯಲ್ಲಿ ಬೆಳಗ್ಗೆ 9.30 ರ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುತ್ತಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಜಿಂಕೆಯೊಂದು ಗ್ರಾಮದತ್ತ ಆಗಮಿಸಿತ್ತು. ಇದನ್ನು ಕಂಡ ಬೀದಿ ನಾಯಿಗಳ ಹಿಂಡು ಅಟ್ಟಾಡಿಸಿ ಕೊಂಡು ಜಿಂಕೆ ಮೇಲೆ ದಾಳಿ ನಡೆಸಲು ಮುಂದಾದವು. ಇದರಿಂದ ಗಾಬರಿಗೊಂಡ ಜಿಂಕೆ ಶಾಲಾ ಆವರಣಕ್ಕೆ ನುಗ್ಗಿತು. ನಾಯಿಗಳು ಜಿಂಕೆಯನ್ನು ಸುತ್ತವರಿಯುತ್ತಿದ್ದನ್ನು ಕಂಡ ಶಿಕ್ಷಕರಾದ ಲೋಕೇಶ್, ಕೆಂಪರಾಜು, ಜೋಸೆಫ್, ಮಾದೇಶ್ ಹಾಗೂ ವಿದ್ಯಾರ್ಥಿಗಳು ಕೂಡಲೇ ಆಗಮಿಸಿ ನಾಯಿಗಳನ್ನು ಓಡಿಸಿದರು.
ಈ ಬಗ್ಗೆ ಶಿಕ್ಷಕರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಸುಸ್ತಾಗಿದ್ದ ಜಿಂಕೆಯನ್ನು ಆರೈಕೆ ಮಾಡಿ ಕೊಠಡಿಯಲ್ಲಿ ಇರಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಜಿಂಕೆಯನ್ನು ಗುಂಡಾಲ್ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.