

ಹನೂರು: ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಅನ್ಯಕೋಮಿನ ಮಹಿಳೆ ಮೇಲೆ ನಾಲ್ವರು ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಮಾಡಿದ ಆರೋಪದಡಿ ಮಂಗಳವಾರ ರಾಮಾಪುರ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಗ್ರಾಮದ ಭೋವಿ ಸಮುದಾಯದ ನಲ್ಲಮ್ಮ ಹಲ್ಲೆಗೊಳಗಾದ ಮಹಿಳೆ. ಇದೇ ಗ್ರಾಮದ ಬೇಡಗಂಪಣ ಸಮುದಾಯದ ಮುರುಗ, ಈತನ ಪುತ್ರ ಸ್ವಾಮಿ, ಪತ್ನಿ ವಸಂತಿ ಹಾಗೂ ಎಸ್ಸಿ ಸಮುದಾಯದ ಚಿನ್ನತಂಬಿ ಬಂಧಿತರು. ಘಟನೆ ವಿವರ: ನಲ್ಲಮ್ಮ ಅವರಿಗೆ ಸೇರಿದ ಕೋಳಿ ಜೂ.30 ರಂದು ಬೇಡಗಂಪಣ ಸಮುದಾಯದ ಮುರುಗ ಅವರ ಮನೆಗೆ ನುಗ್ಗಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಅದೇ ದಿನ ರಾತ್ರಿ 7.30ರಲ್ಲಿ ಮುರುಗ ಎಂಬಾತ ಸ್ವಾಮಿ, ವಸಂತಿ ಹಾಗೂ ಚಿನ್ನತಂಬಿ ಜತೆಗೂಡಿ ನಲ್ಲಮ್ಮನ ಮನೆಗೆ ತೆರಳಿ ಗಲಾಟೆ ಮಾಡಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದರು. ಇದರಿಂದ ಗಾಯಗೊಂಡ ನಲ್ಲಮ್ಮ ಅವರು ರಾಮಾಪುರ ಪೊಲೀಸರಿಗೆ ದೂರು ನೀಡಿ ಕಾಮಗೆರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಎಸ್‌ಐ ರಾಧಾ ಅವರು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು.
ಮಂಗಳವಾರ ಡಿವೈಎಸ್ಪಿ ಧರ್ಮೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರು ಹಾಗೂ ಪೊಲೀಸರಿಂದ ಮಾಹಿತಿ ಪಡೆದರು. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.