

ಹನೂರು; ತಾಲೂಕಿನ ರಾಮಾಪುರ ಗ್ರಾಮದಲ್ಲಿ ಅಪ್ರಾಪ್ತನೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಮಾಪುರ ಇಂದಿರಾ ಕಾಲನಿ ನಿವಾಸಿ ಚೇತನ್ (30) ಬಂಧಿತ. ಜೂ.29 ರಂದು ಗ್ರಾಮದ ಬಡಾವಣೆಯೊಂದರಲ್ಲಿ ಶಾಲೆ ಮುಗಿಸಿಕೊಂಡು ಬಂದ ಇಬ್ಬರು ಅಪ್ರಾಪ್ತ ಬಾಲಕರು ಆಟವಾಡುತ್ತಿದ್ದರು ಎನ್ನಲಾಗಿದೆ. ಆ ವೇಳೆ ಚೇತನ್ ಬಾಲಕನನ್ನು ಮನೆಗೆ ಕರೆದೊಯ್ದ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಜತೆಯಲ್ಲಿ ಆಟವಾಡುತ್ತಿದ್ದ ಸ್ನೇಹಿತ ಸಂತ್ರಸ್ತ ಬಾಲಕನ ತಾಯಿಗೆ ವಿಚಾರ ತಿಳಿಸಲಾಗಿ ಅವರು ಸ್ಥಳಕ್ಕೆ ತೆರಳಿ ನೋಡಿದಾಗ ಅಸಹಜ ಲೈಂಗಿಕ ಕ್ರಿಯೆ ನಡೆಸಿರುವುದು ಗೊತ್ತಾಗಿದೆ. ಈ ಸಂಬಂಧ ಬಾಲಕನ ತಾಯಿ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.