16 ಎಕರೆಯಲ್ಲಿ ಸಮಗ್ರ ಬೇಸಾಯ

1
Published on

ಹನೂರು: ‘ಕೃಷಿ ಬಗ್ಗೆ ಬಾಲ್ಯದಿಂದಲೂ ಆಸಕ್ತಿ. ಆದರೂ ಇಂಜಿನಿಯರಿಂಗ್ ಪದವಿ ಪಡೆದೆ. ಉದ್ಯೋಗಕ್ಕೂ ಹೋಗುತ್ತಿದೆ. ಆದರೆ ಸ್ವಂತ ಬಲದ ಮೇಲೆ ನಿಲ್ಲಬೇಕು ಎಂದು ಛಲತೊಟ್ಟು ಕೃಷಿ ಕಾಯಕಕ್ಕೆ ಧುಮುಕಿ ಸಹೋದರ ಮತ್ತು ತಾಯಿಯ ಸಹಕಾರದಿಂದ ಯಶಸ್ಸು ಕಂಡೆ. ಇದೀಗ ಈ ಕಾಯಕ ನೆಮ್ಮದಿಯ ಬದುಕನ್ನು ರೂಪಿಸಿಕೊಟ್ಟಿದೆ…’

ಇದು ಹನೂರು ಸಮೀಪದ ಲೊಕ್ಕನಹಳ್ಳಿಗೆ ತೆರಳುವ ಹುಬ್ಬೆಹುಣಸೆ ಡ್ಯಾಂ ಬಳಿ ಜಮೀನನ್ನು ಹೊಂದಿರುವ ಪಳನಿಸ್ವಾಮಿ ಮತ್ತು ಶಾರದಾಮಣಿ ದಂಪತಿ ಪುತ್ರ ಯುವ ರೈತ ಮಹೇಂದ್ರನ್ ಮನದಾಳ ಮಾತು. ಮೂಲತಃ ತಮಿಳುನಾಡಿನ ಕೊಯಮತ್ತೂರಿನವರಾದ ಇವರ ಕುಟುಂಬ 50 ವರ್ಷಗಳಿಂದಲೂ ಹನೂರು ಸಮೀಪದ ಹುಬ್ಬೆಹುಣಸೆ ಡ್ಯಾಂ ಬಳಿ ಕೃಷಿ ಮಾಡುತ್ತಿದ್ದು, ಜಮೀನಿನಲ್ಲೇ ವಾಸಿಸುತ್ತಿದ್ದಾರೆ. ಹನೂರಿನಲ್ಲೇ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣ ಮುಗಿಸಿದ ಇವರು ತಮಿಳುನಾಡಿನ ಅಣ್ಣೈ ವಿಶ್ವವಿದ್ಯಾಲಯದಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.

ಬಳಿಕ ಕೊಯಮತ್ತೂರಿನ ಕೆಜಿ ಗ್ರೂಪ್ ಆಫ್ ಕಂಪನಿಯಲ್ಲಿ ಉದ್ಯೋಗ ಪಡೆದು ಒಂದೂವರೆ ವರ್ಷ ಕಾರ್ಯನಿರ್ವಹಿಸಿದರು. ಆದರೆ ಕೆಲಸದ ಒತ್ತಡ ಹಾಗೂ ಕಡಿಮೆ ಸಂಬಳದಿಂದಾಗಿ ಬೇಸತ್ತು ಕೃಷಿ ಮಾಡುತ್ತಿದ್ದ ತಂದೆ-ತಾಯಿ ಬಳಿ ಬಂದು ಕೃಷಿ ಕಾಯಕದಲ್ಲಿ ತೊಡಗುವುದಾಗಿ ತಿಳಿಸಿದರು. ಆದರೆ ಓದಿನ ಆರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆದುಕೊಳ್ಳುವಂತೆ ಪಾಲಕರು ಸಲಹೆ ನೀಡಿದರು. ಆದರೆ ಕೃಷಿಯ ಬಗ್ಗೆ ಆಸಕ್ತಿಹೊಂದಿದ್ದ ಇವರು ಒಲ್ಲದ ಮನಸ್ಸಿನಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದು 7 ತಿಂಗಳು ಕೆಲಸ ಮಾಡಿದರು.
ಆದರೆ ಈ ವೇಳೆ ಕರೊನಾದಿಂದ ಊರಿಗೆ ಮರಳಬೇಕಾಯಿತು. ಈ ವೇಳೆ ಸಂಪೂರ್ಣ ಕಾಯಕದಲ್ಲಿ ತೊಡಗಿದರು. ಆದರೆ ಈ ವೇಳೆಗೆ ತಂದೆ ಅಕಾಲಿಕವಾಗಿ ಮೃತರಾದರು. ಬಳಿಕ ಸ್ವಂತ ಬಲದ ಮೇಲೆ ಕೃಷಿಯನ್ನು ಮುಂದುವರಿಸಿದ ಇವರು ಯಶಸ್ಸು ಕಂಡರು. ಇದೀಗ ಹನೂರು ಭಾಗದಲ್ಲಿ ಮಾದರಿ ಯುವ ರೈತರೆನಿಸಿದ್ದಾರೆ.

14 ಎಕರೆ ಗುತ್ತಿಗೆ ಪಡೆದು ಕೃಷಿ:
ಪಿತ್ರಾರ್ಜಿತ ಆಸ್ತಿಯಾದ 6 ಎಕರೆ ಜಮೀನಿನಲ್ಲಿ ಪ್ರಾರಂಭದಲ್ಲಿ ಈರುಳ್ಳಿ, ಕಡಲೆಕಾಯಿ, ಕಲ್ಲಂಗಡಿ ಹಾಗೂ ತರಕಾರಿ ಬೆಳೆದು ನಷ್ಟ ಅನುಭವಿಸಿದರು. ಬಳಿಕ ಹಿರಿಯರ ಮಾರ್ಗದರ್ಶನ ಪಡೆದು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆದು ಯಶಸ್ಸು ಗಳಿಸಿದರು. ತಾಲೂಕಿನ ಮಂಗಲ ಗ್ರಾಮ ಸಮೀಪದ ಏಕಲವ್ಯ ಶಾಲೆಯ ಬಳಿ 14 ಎಕರೆ ಜಮೀನನ್ನು ಗುತ್ತಿಗೆ ಪಡೆದು ಬಾಳೆ, ಅರಿಶಿಣ ಬೆಳೆದಿದ್ದಾರೆ. ಪಿತ್ರಾರ್ಜಿತ ಜಮೀನಿನ 4 ಎಕರೆಯಲ್ಲಿ ಮುಸುಕಿನಜೋಳ ಬೆಳೆಯಲಾಗಿದ್ದು, ಕಟಾವಿನ ಹಂತಕ್ಕೆ ಬಂದಿದೆ. ಇನ್ನುಳಿದ 2 ಎಕರೆಯಲ್ಲಿ ಅರಿಶಿಣ ಹಾಕಲಾಗಿದ್ದು, ಸಸಿಗಳು ಬಂದಿವೆ. ಕೃಷಿಯಲ್ಲಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಲಾಗುತ್ತಿದೆ.

ಹಸು ಸಾಕಣೆಗೆ ಒತ್ತು:
ಕೃಷಿಯ ಜತೆಗೆ ಹೈನುಗಾರಿಕೆಗೂ ಹೆಚ್ಚಿನ ಒತ್ತನ್ನು ನೀಡಿರುವ ಇವರು 10 ಹಸುಗಳನ್ನು ಸಾಕಣೆ ಮಾಡುತ್ತಿದ್ದು, ಹಸುಗಳಿಗೆ ವಿಮೆ ಮಾಡಿಸಿದ್ದಾರೆ. ನಿತ್ಯ 25 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಜತೆಗೆ ಜಮೀನಿನಲ್ಲಿ 100 ತೆಂಗಿನ ಮರಗಳಿದ್ದು, ಒಂದೂವರೆ ತಿಂಗಳಿಗೊಮ್ಮೆ 800 ಎಳನೀರನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು ಬಾಳೆಗೊನೆಯನ್ನು ಬೆಂಗಳೂರು ಮಾರುಕಟ್ಟೆಗೆ ಕಳುಹಿಸಿದರೆ, ಅರಿಶಿಣ ಹಾಗೂ ಜೋಳವನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದು, ವಾರ್ಷಿಕವಾಗಿ ಉತ್ತಮ ಆದಾಯ ಬರುತ್ತಿದೆ. ಇದರಿಂದ ಕೃಷಿ ಇವರ ಕುಟುಂಬವನ್ನು ಆರ್ಥಿಕವಾಗಿಯೂ ಸದೃಢಗೊಳಿಸಿದೆ.

ಸಹೋದರ, ಅಮ್ಮ ಸಾಥ್:
ಕೃಷಿ ಕಾಯಕದಲ್ಲಿ ತೊಡಗಿರುವ ಇವರಿಗೆ ಐಟಿಐ ಮುಗಿಸಿರುವ ತಮ್ಮ ಸೆಂದಿಲ್‌ಕುಮಾರ್ ಮತ್ತು ತಾಯಿ ಶಾರದಾಮಣಿ ಕೃಷಿಗೆ ಸಾಥ್ ನೀಡುತ್ತಿದ್ದಾರೆ. ಕೃಷಿ ಅಧಿಕಾರಿಗಳು ಹಾಗೂ ಹಿರಿಯ ರೈತರ ಮಾರ್ಗದರ್ಶನ ಕೃಷಿಯಲ್ಲಿ ಶಸ್ಸು ಗಳಿಸಲು ಕಾರಣವಾಗಿದೆ.

ಮನೆ ಬಳಕೆಗೆ ಜಮೀನಿನ ತರಕಾರಿ:
ಕೃಷಿಯ ಜತೆಗೆ ಇವರು ಮನೆ ಬಳಕೆಗೆ ಅಗತ್ಯವಾದ ಸೊಪ್ಪು, ತರಕಾರಿ ಬೆಳೆಯುತ್ತಿದ್ದು, ಮನೆಗೆ ಉಪಯೋಗಿಸುತ್ತಿದ್ದಾರೆ. ಪ್ರತಿ ತಿಂಗಳು ಕೃಷಿ ಚಟುವಟಿಕೆಗಳಿಗೆ 50 ಜನರಿಗೆ ಉದ್ಯೋಗ ನೀಡುತ್ತಿದ್ದಾರೆ.

ಪ್ರಾರಂಭದಲ್ಲಿ ಕೃಷಿಯಲ್ಲಿ ತೊಡಗಿದಾಗ ಕೆಲವರು ನನ್ನನ್ನು ಇಂಜಿನಿಯರ್ ಪದವಿ ಪಡೆದು ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವೇ ಎನ್ನುವ ಮಾತುಗಳನ್ನಾಡುತ್ತಿದ್ದರು. ಹಾಗಾಗಿ ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ಪಣ ತೊಟ್ಟು ಹೆಚ್ಚಿನ ಶ್ರಮ ವಹಿಸಿದೆ. ವಿವಿಧ ಬೆಳೆಗಳನ್ನು ಬೆಳೆದು ಯಶಸ್ಸು ಕಂಡೆ. ಇದೀಗ ಕೃಷಿಯಲ್ಲಿ ಉತ್ತಮ ಅನುಭವ ದೊರಕಿದಂತಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ ಹೆಚ್ಚಿಸಿದೆ.
-ಮಹೇಂದ್ರನ್, ಯುವ ರೈತ

ನನ್ನ ಮಗ ಪ್ರಾರಂಭದಲ್ಲಿ ಕೃಷಿ ಮಾಡಲು ತೊಡಗಿದಾಗ ನಷ್ಟವನ್ನು ಅನುಭವಿಸಬೇಕಾಯಿತು. ಇದರಿಂದ ಕೃಷಿ ಕೈಗೂಡುವುದಿಲ್ಲ ಎಂದೇ ಭಾವಿಸಿದ್ದೆ. ಆದರೆ ಅವನ ಶ್ರಮದ ಫಲವಾಗಿ ಇಂದು ಕೃಷಿಯಲ್ಲಿ ಯಶಸ್ಸು ಕಂಡಿರುವುದು ಖುಷಿ ತಂದಿದೆ.
-ಶಾರದಾಮಣಿ, ಮಹೇಂದ್ರನ್ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net