ಬಾಲ್ಯವಿವಾಹ ಕಂಡುಬಂದಲ್ಲಿ ಮಾಹಿತಿ ನೀಡಿ

oppo_2
oppo_2
Published on

ಹನೂರು: ಠಾಣೆಗೆ ಆಗಮಿಸಿದ ವಿದ್ಯಾರ್ಥಿಗಳು, ಪೊಲೀಸರ ಪರಿಚಯ, ಬಂದಿಖಾನೆ ವೀಕ್ಷಣೆ, ದೂರು ನೀಡುವ ಹಾಗೂ ದಾಖಲಾಗುವ ಪ್ರಕರಣಗಳ ಕುರಿತು ಮಾಹಿತಿ ಪಡೆದ ಮಕ್ಕಳು….

ಇದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಕಂಡು ಬಂದ ದೃಶ್ಯ. ತೆರೆದ ಮನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಠಾಣೆಗೆ ಆಗಮಿಸಿದ್ದ ಪಟ್ಟಣದ ಬಿ.ಎಂ.ಜಿ. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅಲ್ಲಿನ ವಾಸ್ತವತೆ ಕುರಿತು ಮಾಹಿತಿ ಪಡೆದರು.ಕಾರ್ಯಕ್ರಮದ ಅಂಗವಾಗಿ ಶಾಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಠಾಣೆಗೆ ಆಗಮಿಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಠಾಣೆ ಹಾಗೂ ಪೊಲೀಸರು ನಿರ್ವಹಿಸಬೇಕಾದ ಸಂಪೂರ್ಣ ಕಾರ್ಯ ವಿಧಾನದ ಬಗ್ಗೆ ತಿಳಿಸಿಕೊಟ್ಟರು.

ಇನ್‌ಸ್ಪೆಕ್ಟರ್ ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತೆರೆದ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ತಿಳಿದುಕೊಳ್ಳಬೇಕು. ಬಾಲ್ಯ ವಿವಾಹ ಕಾನೂನಿನ ಅಪರಾಧವಾಗಿದ್ದು, ಸಂಬಂಧಪಟ್ಟವರನ್ನು ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದರು ಹನೂರು ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ವಿಪರ್ಯಾಸ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಒಂದು ವೇಳೆ ಗ್ರಾಮಗಳಲ್ಲಿ ಬಾಲ್ಯವಿವಾಹ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.

ಸಹಾಯವಾಣಿ 112ಗೆ ಕರೆ ಮಾಡಿ: ಇತ್ತೀಚಿನ ದಿನಗಳಲ್ಲಿ ಖದೀಮರು ಹಣವನ್ನು ಲಪಟಾಯಿಸುವ ಪ್ರಕರಣಗಳು ಹೆಚ್ಚುತ್ತಿದೆ. ಆದ್ದರಿಂದ ಈ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡಬೇಕು. ಬೈಕ್ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಸಮಸ್ಯೆಗೆ ಸಿಲುಕಿದಲ್ಲಿ ಅಥವಾ ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಗಿ 112ಕ್ಕೆ ಕರೆ ಮಾಡಬಹುದು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದರು. ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಎಎಸೈ ಕೃಷ್ಣ, ಶಿಕ್ಷಕರಾದ ಶಬನಾ ಬೇಗಂ, ದುರ್ಗಾಂಬ, ಮಹೇಶ್, ಪ್ರೇಮಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net