

ಹನೂರು: ಓದು ಎಂದರೆ ಅಂಕ ಪಡೆಯುವುದಲ್ಲ. ಬದಲಾಗಿ ವಿದ್ಯಾವಂತರಾಗುವುದರ ಜತೆಗೆ ಶಿಸ್ತನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಕ್ರಿಸ್ತರಾಜ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಂಪ್ಯೂಟರ್ ಸೈನ್ಸ್ ಮತ್ತು ಸಂಖ್ಯಾಶಾಸ್ತ್ರ ಕೋರ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕ್ರಿಸ್ತರಾಜ ಸಂಸ್ಥೆಯಲ್ಲಿ ನೂತನ ಕೋರ್ಸ್ ಆರಂಭಿಸಿರುವುದು ಮೆಚ್ಚುವಂತಹದ್ದು. ಇದರಿಂದ ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಡಿಡಿಪಿಐ ಮಂಜುನಾಥ್ ಮಾತನಾಡಿದರು. ಕ್ರಿಸ್ತರಾಜ ಸಂಸ್ಥೆಯ ವ್ಯವಸ್ಥಾಪಕ ಫಾ.ರೋಷನ್ ಬಾಬು, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಮೋದ್, ಜಿ.ವಿ ಗೌಡ ಕಾಲೇಜಿನ ಪ್ರಾಂಶುಪಾಲ ಸ್ವಾಮಿ, ಮುಖ್ಯ ಶಿಕ್ಷಕರಾದ ರಾಬರ್ಟ್ ಕ್ಲೆಮಂಟ್, ಧನರಾಜ್, ಶಾಂತಿ ಡಿಸೋಜ, ಜೆಸಿಂತಾ ಗಲ್ಪಾವೊ, ಉಪನ್ಯಾಸಕರಾದ ವಿನೋದ್, ಪವಿತ್ರಾ ಇದ್ದರು.