ಪ್ರಿಸ್ಟನ್ ಅಧ್ಯಕ್ಷ, ಐನ್‌ಸ್ಲಿ ಉಪಾಧ್ಯಕ್ಷೆ

24 HANUR 2
Published on

ಹನೂರು: ತಾಲೂಕಿನ ಮಾರ್ಟಳ್ಳಿಯ ಸೇಂಟ್ ಮೇರಿಸ್ ಪ್ರೌಢಶಾಲೆ ಅಧ್ಯಕ್ಷರಾಗಿ ಪ್ರಿಸ್ಟನ್ ಹಾಗೂ ಉಪಾಧ್ಯಕ್ಷೆಯಾಗಿ ಐನ್‌ಸ್ಲಿ ಆಯ್ಕೆಯಾದರು.

ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೋಮವಾರ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಯಂತೆಯೇ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ವಾರದ ಹಿಂದೆ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಸೂಚನಾ ಫಲಕದಲ್ಲಿ ಅಳವಡಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಹಾಗೂ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಶಾಲೆಯ 13 ವಿದ್ಯಾರ್ಥಿಗಳು ಚುನಾವಣಾಧಿಕಾರಿಯಾದ ಮುಖ್ಯಶಿಕ್ಷಕ ಅನೈನಾದನ್ ಅವರಿಗೆ ನಾಮಪತ್ರ ಸಲ್ಲಿಸಿದ್ದರು.

ಇವರಿಗೆ ಕ್ರಮ ಸಂಖ್ಯೆ ಹಾಗೂ ಚಿಹ್ನೆ ನೀಡಲಾಗಿದ್ದು, ಮಾದರಿ ಮತಪತ್ರದ ಮೂಲಕ ಪ್ರಚಾರಕ್ಕೆ ಅವಕಾಶವನ್ನೂ ಕಲ್ಪಿಸಲಾಗಿತ್ತು. ಮತ ಚಲಾಯಿಸಲು ಗುರುತಿಗಾಗಿ ಆಧಾರ್ ಕಾರ್ಡ್ ನಿಗದಿಪಡಿಸಲಾಗಿತ್ತು. ಅದರಂತೆ ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 231 ವಿದ್ಯಾರ್ಥಿಗಳ ಪೈಕಿ 120 ಬಾಲಕರು ಹಾಗೂ 94 ಬಾಲಕಿಯರು ಮತ ಚಲಾಯಿಸಿದರು. ಪ್ರಿಸ್ಟನ್ 59 ಮತ ಹಾಗೂ ಐನ್‌ಸ್ಲಿ 75 ಮತ ಪಡೆಯುವ ಮೂಲಕ ಶಾಲೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಬಳಿಕ ಶಾಲಾ ಮಂತ್ರಿಮಂಡಲ ರಚಿಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು. ಈ ಕಾರ್ಯದಲ್ಲಿ ಶಿಕ್ಷಕರಾದ ವಿನು, ಅರುಣ ಹಾಗೂ ತೋಮೈ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net