ಸಮಸ್ಯೆ ಬಗೆಹರಿಸಿ ಅಗತ್ಯ ಸೌಕರ್ಯ ಒದಗಿಸಿ

21 HANUR 4
Published on

ಹನೂರು: ಗ್ರಾಮದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಶುಕ್ರವಾರ ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಗ್ರಾಮಸ್ಥರು ರೈತ ಸಂಘಟನೆ ಜತೆಗೂಡಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರು ಗ್ರಾಪಂ ಕಾರ್ಯವೈಖರಿ ಕುರಿತು ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಪಂನಲ್ಲಿ ಇ ಸ್ವತ್ತು ಪಡೆಯಬೇಕಾದರೆ ಇಲ್ಲಿನ ಅಧಿಕಾರಿಗಳು ಲಂಚ ಕೇಳುತ್ತಾರೆ. ನರೇಗಾ ಯೋಜನೆಗೆ ಜೆಸಿಬಿ ಯಂತ್ರ ಬಳಕೆ ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ವಡ್ಡರದೊಡ್ಡಿ ಗ್ರಾಮದಲ್ಲಿ ತೊಂಬೆ ನಿರ್ಮಿಸಲಾಗಿದೆಯಾದರೂ ನೀರು ಪೂರೈಕೆಯಾಗುತ್ತಿಲ್ಲ. ಆಂಬುಲೆನ್ಸ್ ಇಲ್ಲದ ಪರಿಣಾಮ ಈ ಭಾಗದ ಜನರು ತೊಂದರೆ ಪಡುವಂತಾಗಿದೆ. ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಸಮಸ್ಯೆಯಾಗಿದೆ. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ಗ್ರಾಪಂ ಆಡಳಿತ ಯಾವುದೇ ಕ್ರಮವಹಿಸುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ಹೂಳು ತೆಗೆಸಬೇಕು. ನರೇಗಾ ಯೋಜನೆಯಡಿ ಕಡ್ಡಾಯವಾಗಿ 100 ದಿನ ಉದ್ಯೋಗ ನೀಡಬೇಕು. ಜಮೀನುಗಳಲ್ಲಿ ರಿವಿಟ್‌ಮೆಂಟ್ ಕಾಮಗಾರಿಯನ್ನು ಕೈಗೊಳ್ಳಬೇಕು. ಇ ಸ್ವತ್ತು ಪ್ರತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು. ಅಂತೋಣಿಯರ್ ಕೋವಿಲ್ ಹಾಗೂ ವೆಟ್ಟುಕಾಡು ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಮುಚ್ಚುಳ ಅಳವಡಿಸಬೇಕು. ಮಾರ್ಟಳ್ಳಿಯಿಂದ ಗೋಡೆಸ್ಟ್ ನಗರದವರೆಗೆ ರಸ್ತೆ ಅಭಿವೃದ್ಧಿ ಪಡಿಸಬೇಕು. ಈ ಮೂಲಕ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿ ತಿಳಿದು ತಾಪಂ ಸಹಾಯಕ ನಿರ್ದೇಶಕ ರವೀಂದ್ರ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸಮಸ್ಯೆಗಳ ಸಂಬಂಧ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ, ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್, ಮುಖಂಡರಾದ ಅರ್ಪುದರಾಜ್, ಪೆರಿಯನಾಯಗಂ, ಪೀಟರ್, ಪಳನಿಸ್ವಾಮಿ, ವೆಂಕಟೇಶ್ ಆರೋಗ್ಯಮ್ಮ, ಪೊನ್ನಿ, ರಾಣಿ, ಪ್ರೇಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net