ಹನೂರಿನಲ್ಲಿ ಗಮನ ಸೆಳೆದ ಜಾಗೃತಿ ಜಾಥಾ

oppo_2
oppo_2
Published on

ಹನೂರು: ಪ್ರಶಾಂತ ವಾತವರಣ… ನೆರೆದಿದ್ದವರಲ್ಲಿ ಏಕಾಗ್ರತೆ… ಸೂಚನೆ ಆಲಿಸಿ ವಿವಿಧ ಭಂಗಿಗಳಲ್ಲಿ ಮುಕ್ತ ಮನಸ್ಸಿನಿಂದ ಧ್ಯಾನ…ತದೇಕ ಚಿತ್ತದಿಂದ ಹಿತ ನುಡಿ ಆಲಿಕೆ…. ಉತ್ಸುಕತೆಯಿಂದ ಫಲಕಗಳನ್ನಿಡಿದು ಜಾಗೃತಿ ಜಾಥಾದಲ್ಲಿ ಭಾಗಿ..

ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಯೋಗಾಭ್ಯಾಸದಲ್ಲಿ ಕಂಡು ಬಂದ ದೃಶ್ಯಗಳು. ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು, ಆಸರೆ ಫೌಂಡೇಷನ್‌ನ ವಿದ್ಯಾರ್ಥಿಗಳು ಹಾಗೂ ಡಿ.ದೇವರಾಜು ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಸೇರಿದಂತೆ ಸುಮಾರು 150 ಜನರು ಪಾಲ್ಗೊಂಡಿದ್ದರು.

ಮುಂಜಾನೆ 5.45ಕ್ಕೆ ಆರಂಭವಾದ ಯೋಗಾಭ್ಯಾಸ 7ರವರೆಗೂ ನಡೆಯಿತು. ಶಿಕ್ಷಕ ಕೃಷ್ಣಮೂರ್ತಿ ಅವರು ಚಲನ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಶಸಂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಬಾಸನ, ಸೇತು ಬಂಧಾಸನ, ಪವನ ಮುಕ್ತಾಸನ, ನಾಡಿ ಶೋಧಕ ಪ್ರಾಣಾಯಾಮ, ಶೀತಲಿ ಪ್ರಾಣಾಮಾಮ ಸೇರಿದಂತೆ 27 ಆಯಾಮವನ್ನು ಸರಾಗ ಬದ್ಧವಾಗಿ ತಿಳಿಸಿಕೊಟ್ಟರು. ಪ್ರಾರ್ಥನೆಯೊಂದಿಗೆ ಆರಂಭವಾದ ಯೋಗಾಭ್ಯಾಸ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

ಜಾಗೃತಿ ಜಾಥಾ
ವಿದ್ಯಾರ್ಥಿಗಳು ಹಾಗೂ ಪತಂಜಲಿ ಸದಸ್ಯರು ಯೋಗದ ಮಹತ್ವವನ್ನು ಒಳಗೊಂಡ ಫಲಕವನ್ನು ಹಿಡಿದು ಘೋಷಣೆ ಕೂಗುತ್ತ ಪಟ್ಟಣದ ಆರ್‌ಎಂಸಿಯಿಂದ ಹೊರಟರು. ಮ.ಬೆಟ್ಟದ ಮುಖ್ಯ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಮೂಲಕ ಸಾಗಿ ಕಮ್ಮವಾರಿ ಸಮುದಾಯ ಭವನದವರೆಗೆ ಜಾಥ ನಡೆಸಿ ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ದಿನಮಣಿ ನಾಯ್ಡು, ಹಿರಿಯ ಸದಸ್ಯ ರಾಧಕೃಷ್ಣ, ಆಸರೆ ಫೌಂಡೇಷನ್ ಮೇಲ್ವಿಚಾರಕಿ ದಿವ್ಯಾ, ಬಿಸಿಎಂ ಹಾಸ್ಟೆಲ್ ಮೇಲ್ವಿಚಾರಕ ಮಣಿಕಂಠ, ಉಪನ್ಯಾಸಕ ಜಯಕುಮಾರ್ ಪ್ರಮುಖರು ಹಾಜರಿದ್ದರು.

ಯೋಗ ಬಾಳಿನ ಸುಯೋಗ:
ಸಮಿತಿ ಸದಸ್ಯ ಮಾದ ತಂಬಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಕೆಲಸದ ಒತ್ತಡ, ಆಹಾರ ಪದ್ಧತಿ, ಬದಲಾದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಆದರೂ ಆರೋಗ್ಯದ ಕಡೆ ಗಮನ ನೀಡುತ್ತಿಲ್ಲ. ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಉತ್ತಮ ಆರೋಗ್ಯಕ್ಕೆ ಪತಂಜಿಲಿ ಮಹರ್ಷಿಗಳು ಪರಿಚಯಿಸಿದ ಯೋಗವೂ ಅಷ್ಟೇ ಮುಖ್ಯ. ಆರೋಗ್ಯಪೂರ್ಣ ಜೀವನಕ್ಕೆ ಯೋಗ ಸುಯೋಗವಾಗಿದೆ. ಈ ಕಾರಣಕ್ಕಾಗಿಯೇ ವಿಶ್ವದ ಎಲ್ಲ ದೇಶಗಳು ಯೋಗವನ್ನು ಅನುಸರಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಹನೂರಿನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಆರಂಭವಾಗಿ 24 ವರ್ಷ ಕಳೆದಿದ್ದು, ಯೋಗ ಶಿಕ್ಷಣವನ್ನು ನೀಡಲಾಗುತ್ತಿದೆ. ಜತೆಗೆ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಜತೆಗೆ ವಿಜಯವಾಣಿ ಪತ್ರಿಕೆ ಸಹಯೋಗ ನೀಡಿರುವುದು ಖುಷಿ ಕೊಟ್ಟಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಯೋಗ ಶಿಕ್ಷಣ ನೀಡಲು ಆದ್ಯತೆ ನೀಡಲಾಗುವುದು.ದಿನಮಣಿನಾಯ್ಡು ಅಧ್ಯಕ್ಷ, ಪತಂಜಲಿ ಯೋಗ ಶಿಕ್ಷಣ ಸಮಿತಿ ಹನೂರು ಇಂದಿನ ಯುಗದಲ್ಲಿ ಬೆಲೆ ಕಟ್ಟಲಾಗದ ಆಸ್ತಿ ಎಂದರೆ ಯೋಗ. ಇದರಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥೃವನ್ನು ಹೊಂದಬಹುದು. ಈ ದೆಸೆಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯವಾಣಿ ಪತ್ರಿಕೆ ಸಹಕಾರ ನೀಡಿರುವುದಕ್ಕೆ ಧನ್ಯವಾದ.ಆರ್.ಜಯಕುಮಾರ್ ಯೋಗಬಂಧು, ಪತಂಜಲಿ ಶಿಕ್ಷಣ ಸಮಿತಿ, ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net