

ಹನೂರು: ತಾಲೂಕಿನ ಮಂಚಾಪುರ ಗ್ರಾಮದ ಜಮೀನೊಂದರಲ್ಲಿ ಗುರುವಾರ ಬೆಂಕಿ ತಗುಲಿ ರೇಷ್ಮೆ ಹುಳು ಸಾಕಣೆ ಘಟಕ ಆಹುತಿಯಾಗಿದೆ.
ಗ್ರಾಮದ ನಂದಕುಮಾರ್ ಅವರು ಕಳೆದ 2 ವರ್ಷದಿಂದ ಜಮೀನಿನಲ್ಲಿ ಕೃಷಿ ಜತೆಗೆ 60 ಅಡಿ ಉದ್ದದ ಶೆಡ್ ನಿರ್ಮಿಸಿ ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದರು. ಜತೆಗೆ ಪತ್ನಿ ಜತೆ ಇಲ್ಲಿಯೇ ವಾಸವಾಗಿದ್ದರು. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಇಬ್ಬರೂ ಗುಂಡಾಪುರದ ಜಮೀನಿಗೆ ತೆರಳಿದ್ದರು. ಸುಮಾರು 11.30ರಲ್ಲಿ ಶೆಡ್‌ಗೆ ಬೆಂಕಿ ತಗುಲಿದೆ. ಈ ಬಗ್ಗೆ ತಿಳಿದ ಸ್ಥಳೀಯರು ನಂದಕುಮಾರ್‌ಗೆ ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಶೆಡ್ ಬೆಂಕಿಗೆ ಆಹುತಿಯಾಗಿದೆ.
ಇನ್ನೇರಡು ದಿನಗಳಲ್ಲಿ ರೇಷ್ಮೆ ಗೂಡು ತೆಗೆಯಬೇಕಿತ್ತು. ಆದರೆ ಈ ದುರ್ಘಟನೆ ನಡೆದಿದ್ದು, ಸುಮಾರು 10 ಲಕ್ಷ ರೂ. ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ನಂದಕುಮಾರ್ ಮನವಿ ಮಾಡಿದ್ದಾರೆ.