

ಹನೂರು: ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ಹನೂರು ಮಂಡಲದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಚೇರಿ ಆವರಣದಲ್ಲಿ ನೆರೆದಿದ್ದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಡಿಸಿದರು. ಬಿಜೆಪಿ ಹನೂರು ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಜನಸಾಮಾನ್ಯರ ದಿನ ಬಳಕೆಗೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಜತೆಗೆ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳ ದರವನ್ನೂ ಹೆಚ್ಚಿಸಿದೆ. ಇತ್ತ ಮುದ್ರಾಂಕ ಶುಲ್ಕವನ್ನೂ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇದರಿಂದ ಜನ ಸಾಮಾನ್ಯರು ಹಾಗೂ ರೈತರು ಸಂಕಷ್ಟ ಎದುರಿಸಬೇಕಿದೆ. ಇದರ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರವನ್ನೂ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಅಗತ್ಯ ವಸ್ತಗಳ ಬೆಲೆ ಏರಿಕೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಬಗ್ಗೆ ಸರ್ಕಾರದ ಗಮನಹರಿಸಿ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು. ಜತೆಗೆ ಪರಿಶಿಷ್ಟ ಪಂಗಡದ ನೂರಾರು ಕೋಟಿ ರೂ.ಹಣವನ್ನು ಅನ್ಯ ಖಾತೆಗಳಿಗೆ ವರ್ಗಾಯಿಸಿ ಭ್ರಷ್ಟಾಚಾರವೆಸಗಿದ್ದ ಸಚಿವರೊಬ್ಬರಿಗೆ ತಲೆದಂಡವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಪಪಂ ಮಾಜಿ ಸದಸ್ಯ ರಾಜಶೇಖರಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷ ಚುನಾವಣೆಯ ವೇಳೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ಜಾರಿಗೊಂಡ ಯೋಜನೆಗಳಲ್ಲಿ ಹಲವು ನಿಬಂಧನೆಗಳನ್ನು ವಿಧಿಸಿದೆ. ಮಹಿಳೆಯರ ಉಚಿತ ಪ್ರಯಾಣ ಅವಾಂತರ ಸೃಷ್ಟಿಸಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಸರಿದೂಗಿಸುವ ಸಲುವಾಗಿ ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಮಾಡುತ್ತಿದ್ದು, ರಾಜ್ಯದ ಜನರಿಗೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮ.ಬೆಟ್ಟ ಮಂಡಲಾಧ್ಯಕ್ಷ ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಮೀನಾ, ಮುಖಂಡರಾದ ಕೆಂಪಣ್ಣ, ಪುಟ್ಟರಾಜು, ಬಸವರಾಜು, ರೇವಣ್ಣ, ದೊಡ್ಡಮಾದಪ್ಪ, ಜಗನ್ನಾಥ್‌ನಾಯ್ಡು, ವರಪ್ರಸಾದ್, ಲೋಕೇಶ್‌ಜತ್ತಿ, ಅರವಿಂದ್, ಶ್ರೀನಿವಾಸ್, ಮೂರ್ತಿ, ಮತ್ತಿತರರಿದ್ದರು.