ರಾಜ್ಯ ಸರ್ಕಾರದ ವಿರುದ್ಧ ರೈತಸಂಘ ಆಕ್ರೋಶ

oppo_2
oppo_2
Published on

ಹನೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ಪಟ್ಟಣದಲ್ಲಿ ರಸ್ತೆ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಮಾಪುರ -ಎಲ್ಲೇಮಾಳ ವಿಭಜಕ ರಸ್ತೆ ಬಳಿ ಜಮಾಯಿಸಿದ ನೂರಾರು ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ಸಾಗಿದರು. ಬಳಿಕ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಹನೂರು ತಾಲೂಕು ಬರಗಾಲದಿಂದ ತತ್ತರಿಸುತ್ತಿದ್ದು, ಇದೀಗ ಮಳೆಯಾಗುತ್ತಿದೆ. ಆದರೂ ಸರ್ಕಾರ ಬರ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ. ಇತ್ತ ಬಿತ್ತನೆ ಬೀಜದ ಬೆಲೆ ಏರಿಕೆಯಾಗಿದೆ. ಇನ್ನು ಮಳೆ ಗಾಳಿಯಿಂದಾಗಿ ಬಾಳೆ ಫಸಲು ನಷ್ಟವಾಗಿದೆ. ಇದರಿಂದ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈಗ ತಾನೇ ಕೃಷಿ ಚಟುವಟಿಕೆ ಆರಂಭವಾಗಿದ್ದು, ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ?. ಇದರಿಂದ ರಾಜ್ಯ ಸರ್ಕಾರ ರೈತರನ್ನು ಮತ್ತಷ್ಟು ಕಷ್ಟಕ್ಕೆ ನೂಕಿದೆ. ಆದ್ದರಿಂದ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿಸಿಗೆ ಮನವಿ ಸಲ್ಲಿಕೆ:
ಬಳಿಕ ರೈತರು ಮನವಿ ಸಲ್ಲಿಸಲು ತಹಸೀಲ್ದಾರ್ ಕಚೇರಿಗೆ ತೆರಳಿದರು. ಆದರೆ ತಹಸೀಲ್ದಾರ್ ಅವರು ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ತೆರಳಿದ್ದರು. ಇದನ್ನು ತಿಳಿದ ರೈತರು ಅಲ್ಲಿಗೆ ತೆರಳಿ ಕಾದು ಕುಳಿತು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.
ಫಸಲ್ ಬಿಮಾ ಯೋಜನೆಯಡಿ ಬಾಳೆ, ಕಬ್ಬು ಹಾಗೂ ತೆಂಗು ಬೆಳೆಗಳಿಗೆ ವಿಮಾ ಸೌಲಭ್ಯ ಕಲ್ಪಿಸುವಂತೆ ರೈತರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ಮಂಜುನಾಥ್, ಈ ಸಂಬಂಧ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು. ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಕುಮಾರ್, ಕಾರ್ಯದರ್ಶಿ ಭಾಸ್ಕರ್, ರೈತ ಮುಖಂಡರಾದ ರವಿನಾಯ್ಡು, ಅರ್ಪುದರಾಜ್, ಶೇಷಾದ್ರಿ, ಪಳನಿ ಸ್ವಾಮಿ, ಲೋಕೇಶ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net