ಸಸಿ ನೆಟ್ಟು ನೀರೆರೆದ ನ್ಯಾಯಾಧೀಶೆ ಎಂ.ಎನ್.ನಂದಿನಿ

oppo_2
oppo_2
Published on

ಹನೂರು: ತಾಲೂಕಿನ ಬಸಪ್ಪನದೊಡ್ಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹೋಲಿಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸ್ಯ ಶ್ಯಾಮಲ ಯೋಜನೆಯಡಿ ಆಯೋಜಿಸಿದ್ದ ಹತ್ತು ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಾಲಾವರಣದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ ಅವರು ಸಸಿ ನೆಟ್ಟು ನೀರೆರೆದರು. ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಿದಂತೆ ಕಟ್ಟಡ ನಿರ್ಮಾಣ, ತ್ಯಾಜ್ಯವನ್ನು ನೀರಿಗೆ ಬಿಡುವುದು, ಮರಗಳನ್ನು ಕಡಿಯುವುದು ಹಾಗೂ ಪರಿಸರಕ್ಕೆ ಹಾನಿಯಾಗುವ ಚಟುವಟಿಕೆ ಹೆಚ್ಚಾಗುತ್ತಿವೆ. ಇದು ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಜೂ.5 ಬಂತೆಂದರೆ ಎಲ್ಲರೂ ಪರಿಸರ ದಿನವನ್ನು ಆಚರಿಸುತ್ತಾರೆ. ಆದರೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸದಿರುವುದು ವಿಪರ್ಯಾಸ. ಈ ಹಿಂದೆ ಮನುಷ್ಯನ ಆಯಸ್ಸು 100ರ ಗಡಿ ದಾಟುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದ ಅಸಮತೋಲನದಿಂದ ಮನುಷ್ಯನ ಆರೋಗ್ಯ ಕ್ಷೀಣಿಸುತ್ತಿದ್ದು, ಆಯಸ್ಸು 70 ದಾಟಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪರಿಸರ ನಾಶಕ್ಕೆ ಮನುಷ್ಯನೇ ಮುಖ್ಯ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯನಿಗೆ ಆಹಾರ, ನೀರು ಎಷ್ಟು ಮುಖ್ಯವೋ ಗಾಳಿಯೂ ಅಷ್ಟೇ ಮುಖ್ಯ. ಆದರೆ ಪರಿಸರ ನಾಶದಿಂದ ಉತ್ತಮ ಗಾಳಿ ಸಿಗುತ್ತಿಲ್ಲ. ಇದರಿಂದ ಪ್ರಸ್ತುತ ದಿನಗಳಲ್ಲಿ ಕುಡಿಯುವ ನೀರಿಗೆ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಆಮ್ಲಜನಕಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಬಂದೊದಗುವುದು ಆಶ್ಚರ್ಯವೇನಿಲ್ಲ. ಆದ್ದರಿಂದ ಪರಿಸರದ ಅಳಿವು, ಉಳಿವು ನಮ್ಮೆಲ್ಲರ ಕೈಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಗಿಡ, ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಪ್ರವೀಣ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಸಿ.ರವಿ, ಕಾರ್ಯದರ್ಶಿ ಸಿ.ಬಿ.ಮಹೇಶ್‌ಕುಮಾರ್, ಹಿರಿಯ ವಕೀಲ ಎಸ್.ನಾಗರಾಜು, ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶ್, ಮುಖ್ಯ ಶಿಕ್ಷಕ ವಿ.ವೀರಪ್ಪ, ಹೋಲಿಕ್ರಾಸ್ ಸಂಸ್ಥೆಯ ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್‌ಖಾನ್, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net