

ಹನೂರು: ಒಡಲ ಹಸಿವು ತಣಿಸಲು ಹಚ್ಚಿದ ಒಲೆಯ ಬೆಂಕಿ ಮನೆಯನ್ನೇ ಸುಟ್ಟು ಹಾಕಿದೆ. ಸೌದೆ ಒಲೆಯಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಬಡ ಕೂಲಿಕಾರಳ ನೆತ್ತಿ ಮೇಲಿದ್ದ ಸೂರು ಸುಟ್ಟು ಕರುಕಲಾಗಿದೆ. ಬೆವರು ಹರಿಸಿ ಕೂಡಿಟ್ಟಿದ್ದ ಹಣ ಬೆಂಕಿಯಲ್ಲಿ ಅರ್ಧಂಬರ್ಧ ಬೆಂದು ಹೋಗಿದೆ.
ಹನೂರು ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಾಗಮ್ಮ ಎಂಬುವರಿಗೆ ಸೇರಿದ ಮನೆ ಮಂಗಳವಾರ ಬೆಂಕಿಗೆ ಆಹುತಿಯಾಗಿದೆ. ಜಮೀನಿನಲ್ಲಿ ಕೂಲಿ ಕೆಲಸ ಮಾಡುವ ನಾಗಮ್ಮ ಬಳಿ ಗ್ಯಾಸ್ ಮತ್ತು ಸಿಲಿಂಡರ್ ಇಲ್ಲ. ಎಂದಿನಂತೆ ಮಂಗಳವಾರವೂ ಸೌದೆ ಒಲೆಯಲ್ಲೇ ಅಡುಗೆ ಮಾಡಿ, ಊಟ ಮಾಡಿ ಮನೆಯ ಬಾಗಿಲು ಹಾಕಿಕೊಂಡು ಕೂಲಿಗೆ ಹೊರಟಿದ್ದಳು.
ಇತ್ತ ಒಲೆಯ ಬೂದಿಯೊಳಗೆ ಮುಚ್ಚಿದ್ದ ಕೆಂಡಿಂದ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ವಸ್ತುಗಳು ಸುಟ್ಟು ಹೋಗಿವೆ. ಈಕೆಯ ಮಗ ಬೇರೆ ಮನೆಯಲ್ಲಿದ್ದಾನೆ. ಆಶ್ರಯ ಇಲ್ಲದೆ ಇದ್ದ ಕಾರಣ ಗ್ರಾಮಸ್ಥರೊಬ್ಬರು ಕೊಟ್ಟಿದ್ದ ಮನೆಯಲ್ಲಿ ನಾಗಮ್ಮ ಇದ್ದಳು. ಈಗ ಈ ಮನೆಗೂ ಬೆಂಕಿ ಬಿದ್ದಿದೆ. ಹಾಸಿಗೆ ಕೆಳಗೆ ಕೂಡಿಟ್ಟಿದ್ದ 1 ಲಕ್ಷ ರೂ. ಬೆಂಕಿಯಲ್ಲಿ ಅರೆಬೆಂದು ಹೋಗಿದೆ. ಕೂಲಿ ಮಾಡಿ ಕೂಡಿಟ್ಟ ನೋಟುಗಳು ಬೆಂಕಿ ಬಿದ್ದು ಅರ್ಧಂಬರ್ಧ ಸುಟ್ಟು ಹೋಗಿವೆ. ಸ್ಥಳೀಯರು ಬೆಂಕಿ ನಂದಿಸಿದ್ದಾರೆ.