ಅದ್ದೂರಿ ಬಸವ ಜಯಂತಿ

oppo_2
oppo_2
Published on

ಹನೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹನೂರು ತಾಲೂಕು ಘಟಕ ಹಾಗೂ ವೀರಶೈವ ಸಂಘ, ಸಂಸ್ಥೆಗಳಿಂದ ಭಾನುವಾರ ಬಸವಣ್ಣನ 891ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪಟ್ಟಣದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಮುಂಭಾಗದಲ್ಲಿ ಬೆಳಗ್ಗೆ 10.30ಕ್ಕೆ ಅಶ್ವರೂಢ ವಾಹನದಲ್ಲಿ ಶ್ರೀ ಬಸವಣ್ಣನ ಉತ್ಸವ ಮೂರ್ತಿ ಇರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು, ಗಣ್ಯರು ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ಹೋಗಲಾಡಿಸಲು ಶ್ರಮಿಸಿದ್ದರು. ವಚನಗಳ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಶ್ರಮಿಸಿದ ಸಾಮಾಜಿಕ ಕ್ರಾಂತಿಕಾರ. ಇವರು ತಮ್ಮ ವಚನಗಳಲ್ಲಿ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಎಂದು ಪ್ರತಿಪಾದಿಸುವುದರ ಮೂಲಕ ಸಮಾಜದ ಸಮಾನತೆಗೆ ಶ್ರಮಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು. ಇದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.

ವಿಜೃಂಭಣೆಯ ಮೆರವಣಿಗೆ:
ನಂದಿಕಂಬ ಕುಣಿತ, ವೀರಗಾಸೆ, ಡೊಳ್ಳು, ಇನ್ನಿತರ ಕಲಾ ತಂಡ ಹಾಗೂ ವಾದ್ಯ ಮೇಳದೊಂದಿಗೆ ಬಸವಣ್ಣನ ಮೂರ್ತಿ ಮೆರವಣಿಗೆಯು ಮಠದ ರಸ್ತೆ, ಪಟ್ಟಣದ ಬಸ್ ನಿಲ್ದಾಣ, ಮುಖ್ಯ ರಸ್ತೆಯ ಮೂಲಕ ಆರ್‌ಎಂಸಿವರೆಗೆ ತೆರಳಿತು. ಈ ವೇಳೆ ವಿವಿಧ ಗ್ರಾಮಗಳಿಂದ ಆಗಮಿಸಿದ ನಂದಿ ಕಂಬ ಕುಣಿತ ಎಲ್ಲರ ಗಮನ ಸೆಳೆಯಿತು. ವಿವಿಧ ಕಲಾ ತಂಡಗಳ ನೃತ್ಯ ಮೆರವಣಿಗೆಗೆ ಮೆರುಗು ತಂದಿತು. ದಾರಿಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಇನ್ನು ವಿವಿಧ ಗ್ರಾಮಗಳಿಂದ ಆಗಮಿಸಿದ ಬಸವಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತು. ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಮಠಾಧೀಶರು, ಗಣ್ಯರು ಭಾಗಿ:
ಕಾರ್ಯಕ್ರಮದಲ್ಲಿ ಮುಡಿಗುಂಡ ಮಠದ ಶ್ರೀಕಂಠ ಸ್ವಾಮೀಜಿ, ಗುಂಡೇಗಾಲದ ಮಲ್ಲಿಕಾರ್ಜುನ ಸ್ವಾಮೀಜಿ, ಬಂಡಳ್ಳಿಯ ಫಲಾಹಾರ ಪ್ರಭುದೇವ ಸ್ವಾಮೀಜಿ, ಅಜ್ಜೀಪುರದ ನಂದೀಶ ಶಿವಾಚಾರ್ಯ ಸ್ವಾಮೀಜಿ, ರಾಮಾಪುರದ ಬಸವಣ್ಣ ಸ್ವಾಮೀಜಿ, ಚಿಕ್ಕಿಂದುವಾಡಿಯ ಬಾಲಷಡಕ್ಷರ ಸ್ವಾಮೀಜಿ ಹಾಗೂ ಇನ್ನಿತರ ಮಠದ ಸ್ವಾಮೀಜಿ ಭಾಗವಹಿಸಿದ್ದರು. ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕರಾದ ಆರ್.ನರೇಂದ್ರ, ಪರಿಮಳಾ ನಾಗಪ್ಪ, ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ಕಾರ್ಯದರ್ಶಿ ಆನಾಪುರ ಉಮೇಶ್, ತಾಲೂಕು ಅಧ್ಯಕ್ಷ ಬಸವರಾಜಪ್ಪ, ಮುಖಂಡರಾದ ಡಾ.ಪ್ರೀತನ್ ನಾಗಪ್ಪ, ನಿಶಾಂತ್ ಹಾಗೂ ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net