ಕೃಷಿ ನಂಬಿ ಬದುಕು ಹಸನು

oppo_2
oppo_2
Published on

ಹನೂರು: ತಂದೆ ಕಾಲವಾದ ನಂತರ ಜಮೀನನ್ನು ನೋಡಿಕೊಳ್ಳುವವರು ಇಲ್ಲದ ಪರಿಣಾಮ ಶಿಕ್ಷಣವನ್ನು ಪಿಯುಗೆ ನಿಲ್ಲಿಸಿ ಕೃಷಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದರ ಜತೆಗೆ ಹೈನುಗಾರಿಕೆಯಲ್ಲೂ ಯಶಸ್ಸು ಕಂಡಿರುವ ವ್ಯಕ್ತಿಯೊಬ್ಬರು ಮಾದರಿ ಕೃಷಿಕನಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ತಾಲೂಕಿನ ಕೆ. ಗುಂಡಾಪುರ ಗ್ರಾಮದ ದಿ.ಅಜ್ಜನಾಯಕ ಅವರ ಮಗ ಗೋಪಾಲ್ ಕೃಷಿ ಮೇಲೆ ಪ್ರೀತಿ ಬೆಳೆಸಿಕೊಂಡು ಬದುಕು ಹಸನು ಮಾಡಿಕೊಂಡಿರುವ ರೈತ. ಪ್ರಾಥಮಿಕ ಶಿಕ್ಷಣವನ್ನು ಬಸಪ್ಪನದೊಡ್ಡಿಯ ಸರ್ಕಾರಿ ಶಾಲೆ, ಪ್ರೌಢ ಶಿಕ್ಷಣವನ್ನು ಅಜ್ಜೀಪುರದ ಜೆಎಸ್‌ಎಸ್ ಹಾಗೂ ರಾಮಾಪುರದ ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದ ಗೋಪಾಲ್ ಅವರು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆ ಹೊಂದಿದ್ದರು. ಆದರೆ ಈ ವೇಳೆಗೆ ತಂದೆ ಕಾಲವಾದರು. ಇದರಿಂದ ವಿಚಲಿತರಾದ ಇವರು ಶಿಕ್ಷಣವನ್ನು ಮೊಟಕುಗೊಳಿಸಿದರು. ಜಮೀನನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಇದರ ಜವಾಬ್ದಾರಿ ಇವರ ಹೆಗಲೇರಿತು. ಬಳಿಕ ವಿವಾಹವಾದರು.

ಬಾಲ್ಯದಲ್ಲಿಯೇ ತಂದೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರೂ ಇವರಿಗೆ ಕೃಷಿಯಲ್ಲಿ ಅಷ್ಟಾಗಿ ಅನುಭವ ಇರಲಿಲ್ಲ. ಆದರೂ ಕುಟುಂಬದ ನಿರ್ವಹಣೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೃಷಿ ಕಾಯಕವನ್ನು ಮಾಡಬೇಕಾಗಿ ಬಂತು. ಆರಂಭದಲ್ಲಿ ನಷ್ಟವನ್ನು ಅನುಭವಿಸಬೇಕಾಯಿತು. ಆದರೆ ಧೃತಿಗೆಡದ ಇವರು ಅಕ್ಕಪಕ್ಕದ ರೈತರ ಸಲಹೆಯನ್ನು ಪಡೆದರು. ಬಳಿಕ ಒಂದೂವರೆ ಎಕರೆಯಲ್ಲಿ 50 ಕ್ವಿಂಟಾಲ್ ಅರಿಸಿಣವನ್ನು ಬೆಳೆದು ಯಶಸ್ಸು ಕಂಡರು. ಉತ್ತಮ ಆದಾಯವೂ ದೊರೆಯಿತು.

ಈ ಗೆಲುವಿನಿಂದಾಗಿ ಗೋಪಾಲ್‌ಗೆ ಕೃಷಿಯ ಬಗ್ಗೆ ಒಲವು ಹೆಚ್ಚಾಯಿತು. ವಿವಿಧ ಬೆಳೆಗಳನ್ನು ಬೆಳೆಯಲು ಕಾರಣವಾಯಿತು. ಕೃಷಿಯಲ್ಲೇ ನೆಮ್ಮದಿಯನ್ನು ಕಂಡು ಕೊಂಡ ಇವರು ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದುವ ಸಲುವಾಗಿ ಹೈನುಗಾರಿಕೆಯನ್ನು ಆರಂಭಿಸಿದರು. ಇದರಲ್ಲೂ ಯಶಸ್ಸು ಗಳಿಸಿದರು. ಇದೀಗ ಈ ಭಾಗದ ರೈತ ವಲಯದಲ್ಲಿ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

ಉತ್ತಮ ಬದುಕು:
ಗೋಪಾಲ್ ಅವರು ಗ್ರಾಮದ ಹೊರವಲಯದಲ್ಲಿ ಪಿತ್ರಾರ್ಜಿತ ಆಸ್ತಿಯಾಗಿ ಮೂರೂವರೆ ಎಕರೆ ಜಮೀನನ್ನು ಹೊಂದಿದ್ದು, ಇದರಲ್ಲಿ ಕಬ್ಬು, ಅರಿಸಿಣ, ಮುಸುಕಿನ ಜೋಳ, ಟೊಮ್ಯಾಟೊ, ಈರುಳ್ಳಿ, ಬೀನ್ಸ್ ಹಾಗೂ ಎಲೆಕೋಸು ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಒಂದು ಎಕರೆಯಲ್ಲಿ ಟೊಮ್ಯಾಟೊ , ಸಣ್ಣ ಈರುಳ್ಳಿಯನ್ನು ಬೆಳೆದಿದ್ದು, ಅರ್ಧ ಎಕರೆಯಲ್ಲಿ ಕುರಿಗಳಿಗಾಗಿ ಮೇವನ್ನೂ ಬೆಳೆದಿದ್ದಾರೆ. ಇನ್ನುಳಿದ ಎರಡು ಎಕರೆಯಲ್ಲಿ ಕಬ್ಬು ಹಾಗೂ ಅರಿಸಿಣವನ್ನು ಬೆಳೆಯಲು ಭೂಮಿಯನ್ನು ಹದಗೊಳಿಸಿ ಬಿಟ್ಟಿದ್ದಾರೆ. ಈ ಭಾಗದಲ್ಲಿ ಉಡುತೊರೆ ಜಲಾಶಯ ಇರುವ ಕಾರಣ ಅಂತರ್ಜಲ ಮಟ್ಟ ಉತ್ತಮವಾಗಿದೆ. ಹಾಗಾಗಿ ತೋಡುಬಾವಿಯ ಮೂಲಕವೇ ಜಮೀನಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದ್ದು, ಭೂಮಿಯನ್ನು ಪಾಳು ಬಿಡದೆ ಕಾಲಕಾಲಕ್ಕೆ ತಕ್ಕಂತೆ ಕೃಷಿಯಲ್ಲಿ ಬೆಳೆ ಬೆಳೆದು ಹೆಚ್ಚಿನ ಇಳುವರಿ ಪಡೆಯುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದರಿಂದ ಶಿಕ್ಷಣ ಮೊಟಕುಗೊಳಿಸಿದರೂ ಕೃಷಿ ಇವರ ಕೈ ಹಿಡಿದಿದ್ದು, ಉತ್ತಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಇದರಿಂದ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಬೆಳ್ಳುಳ್ಳಿ ಬೆಳೆಯಲು ನಿರ್ಧಾರ:
ಗುಂಡಾಪುರ ಭಾಗದಲ್ಲಿ ಯಾರೂ ಸಹ ಬೆಳ್ಳುಳ್ಳಿಯನ್ನು ಬೆಳೆದಿಲ್ಲ. ಹಾಗಾಗಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಉತ್ತಮ ಅನುಭವವನ್ನು ಹೊಂದಿರುವ ಇವರು ಈ ಬೆಳೆ ಬೆಳೆಯಲು ಸವಾಲಾಗಿ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಬೆಳ್ಳುಳ್ಳಿ ಬೆಳೆಯಲು ನಿರ್ಧರಿಸಿದ್ದಾರೆ. ಇದರಲ್ಲಿ ಯಶಸ್ಸು ಗಳಿಸುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.

ಕೊಟ್ಟಿಗೆ ಗೊಬ್ಬರ ಬಳಕೆ
ಕೃಷಿಯಲ್ಲೇ ಸಂಪೂರ್ಣ ತೊಡಗಿರುವ ಇವರು ಈ ಬಗ್ಗೆ ಇನ್ನಿಲ್ಲದ ಆಸಕ್ತಿಯನ್ನು ವಹಿಸಿದ್ದಾರೆ. ಈ ದೆಸೆಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯುವುದೇ ಇವರ ಉದ್ದೇಶವಾಗಿದೆ. ಹಾಗಾಗಿ ಕಾಲಕಾಲಕ್ಕೆ ತಕ್ಕಂತೆ ಬೆಳೆಗಳ ಉಪಚಾರದಲ್ಲಿ ತೊಡಗಿದ್ದು, ಕೀಟಭಾದೆ ತಗುಲದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ. ಜತೆಗೆ ಕುರಿಗಳಿಂದ ವರ್ಷಕ್ಕೆ 12 ಟ್ರಾಕ್ಟರ್ ಕೊಟ್ಟಿಗೆ ಲಭಿಸುತ್ತಿದ್ದು, ಇದನ್ನು ಸಂಪೂರ್ಣವಾಗಿ ಕೃಷಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಹೈಟೆಕ್ ಕುರಿ ಸಾಕಣೆಗೆ ಚಿಂತನೆ:
ಕೃಷಿಯಲ್ಲಿ ಉತ್ತಮ ಅನುಭವ ಹೊಂದಿರುವ ಇವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಹೈನುಗಾರಿಕೆ ಆರಂಭಿಸಲು ನಿರ್ಧರಿಸಿದರು. ಈ ಬಗ್ಗೆ ತಿಳಿಯಲು ಕೃಷಿ ಮೇಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಇದು ಹೈನುಗಾರಿಕೆಗೆ ಪ್ರೇರಣೆ ನೀಡಿತು. ಬಳಿಕ 2020ರ ಕೋವಿಡ್ ಸಂದರ್ಭದಲ್ಲಿ ಮಂಡ್ಯದ ಕಿರುಗಾವಲಿನಿಂದ 20 ಬಂಡೂರು ಕುರಿಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಆರಂಭಿಸಿದರು. ಕುರಿಗಳ ಸಂಖ್ಯೆ ಹೆಚ್ಚಾಯಿತು. ಆಗಾಗ್ಗೆ ಮಾರಾಟ ಮಾಡುತ್ತಿದ್ದರೂ ಇದೀಗ 40 ಕುರಿಗಳನ್ನು ಸಾಕಣೆ ಮಾಡುತ್ತಿದ್ದು, ಪ್ರತ್ಯೇಕ ಶೆಡ್ ನಿರ್ಮಿಸಿದ್ದಾರೆ. ಜಮೀನಿನಲ್ಲಿಯೇ ಮೇವು ಬೆಳೆದು ಪೂರೈಸಲಾಗುತ್ತಿದ್ದು, ಉತ್ತಮವಾಗಿ ಪೋಷಣೆ ಮಾಡಲಾಗುತ್ತಿದೆ. ಜತೆಗೆ 50 ಕೋಳಿಗಳನ್ನು ಸಾಕಣೆ ಮಾಡುತ್ತಿದ್ದು, ಇದರ ಮಾರಾಟದಿಂದ ಉತ್ತಮ ಆದಾಯವೂ ಬರುತ್ತಿದೆ. ಇದರಿಂದ ಕೃಷಿಯ ಜತೆಗೆ ಹೈನುಗಾರಿಕೆಗೂ ಹೆಚ್ಚಿನ ಒತ್ತನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಹೈಟೆಕ್ ಕುರಿ ಸಾಕಣೆ ಬಗ್ಗೆ ಗೋಪಾಲ್ ಚಿಂತನೆ ನಡೆಸಿದ್ದಾರೆ.

ಮರಗಳಿಂದಲೂ ಉತ್ತಮ ಆದಾಯ:
ಜಮೀನಿನಲ್ಲಿ 50 ತೆಂಗು ಹಾಗೂ 4 ಹಲಸಿನ ಮರಗಳಿವೆ. ಇದರಿಂದ ವಾರ್ಷಿಕವಾಗಿ ಉತ್ತಮ ಆದಾಯ ಬರುತ್ತಿದ್ದು, ಕುಟುಂಬದ ನಿರ್ವಹಣೆಗೆ ಬಳಕೆ ಮಾಡಲಾಗುತ್ತಿದೆ. ಜತೆಗೆ 20 ಹೆಬ್ಬೇವು ಹಾಗೂ 10 ತೇಗದ ಮರವನ್ನು ಬೆಳೆಸಿದ್ದು, ಗೋಪಾಲ್ ಅವರು ಭವಿಷ್ಯದಲ್ಲಿ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕುಟುಂಬಸ್ಥರ ಸಾಥ್
ಸಂಪೂರ್ಣ ಕೃಷಿಯಲ್ಲಿ ತೊಡಗಿರುವ ಇವರಿಗೆ ತಾಯಿ ವರದಮ್ಮ ಹಾಗೂ ಪತ್ನಿ ರೇಖಾ ಅವರು ಕೃಷಿ ಚಟುವಟಿಕೆಗಳಲ್ಲಿ ಭಾಗಿ ಆಗುವುದರ ಮೂಲಕ ಸಂಪೂರ್ಣ ಸಹಕಾರ ನೀಡಿದ್ದಾರೆ. ಹಾಗಾಗಿ ಇವರ ಸಹಕಾರ ಗೋಪಾಲ್‌ಗೆ ಸ್ಫೂರ್ತಿ ನೀಡಿದಂತಾಗಿದೆ. ಇದರಿಂದ ಕೃಷಿಯಲ್ಲಿ ಉತ್ಸುಕತೆಯನ್ನು ಹೊಂದಿದ್ದಾರೆ. ಇನ್ನು ಮನೆ ಬಳಕೆಗೆ ಅಗತ್ಯ ತರಕಾರಿ ಹಾಗೂ ಸೊಪ್ಪುಗಳನ್ನು ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತಿದ್ದು, ಆರ್ಥಿಕ ಉಳಿತಾಯವನ್ನು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಹೇಳುವುದಾರೆ ಶಿಕ್ಷಣವನ್ನು ಮೊಟಕುಗೊಳಿಸಿದ ಇವರು ಕೃಷಿಯ ಬಗ್ಗೆ ಒಲವು ತೋರಿ ಯಶಸ್ಸು ಕಾಣುವುದರ ಮೂಲಕ ನೆಮ್ಮದಿಯುತ ಬದುಕನ್ನು ರೂಪಿಸಿಕೊಂಡು ಜೀವನ ನಡೆಸುತ್ತಿರುವುದು ಮೆಚ್ಚುವ ಸಂಗತಿ.

ಕಳೆದ 23 ವರ್ಷಗಳಿಂದಲೂ ಸಂಪೂರ್ಣ ಕೃಷಿಯಲ್ಲಿ ತೊಡಗಿದ್ದು, ಉತ್ತಮ ಅನುಭವವನ್ನು ಹೊಂದಲಾಗಿದೆ. ಹಾಗಾಗಿ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ. ಜತೆಗೆ ಕಳೆದ 4 ವರ್ಷದಿಂದ ಕುರಿ ಹಾಗೂ ಕೋಳಿ ಸಾಕಣೆಯಲ್ಲಿ ತೊಡಗಿದ್ದು, ಉತ್ತಮ ಆದಾಯವೂ ಬರುತ್ತಿದೆ. ಇದರಿಂದ ಕೃಷಿ ಕಾಯಕ ನೆಮ್ಮದಿಯನ್ನು ತಂದು ಕೊಟ್ಟಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ನಾವೀನ್ಯತೆಯ ಚಿಂತನೆ ಮಾಡಲಾಗಿದೆ.ಗೋಪಾಲ್, ರೈತ ಕೆ.ಗುಂಡಾಪುರ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net