

ಹನೂರು: ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೆ ಅನ್ಯಾಯವೆಸಗಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನೆ ನಿರ್ದೇಶಕರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದಿವಾಸಿ ಸಮನ್ವಯ ಮಂಚ್ ಭಾರತ್ ಅಧ್ಯಕ್ಷ ವಿ.ಮುತ್ತಯ್ಯ ಒತ್ತಾಯಿಸಿದ್ದಾರೆ.
ದೇಶದ ಇತರ ರಾಜ್ಯಗಳಲ್ಲಿನ ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಮೂಲಕ ಬುಡಕಟ್ಟು ಜನರ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಆದರೆ ಕರ್ನಾಟಕದಲ್ಲಿನ ಸಂಸ್ಥೆ ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದೆ. ಇದರಿಂದ ಬುಡಕಟ್ಟು ಜನರಿಗೆ ಅನ್ಯಾಯವಾಗಿದೆ. ಸಂಶೋಧನಾ ಸಂಸ್ಥೆಯು ಬುಡಕಟ್ಟು ಜನರಿಗೆ ತರಬೇತಿ, ಮೌಲ್ಯಮಾಪನ, ಕುಲಶಾಸ್ತ್ರೀಯ ಅಧ್ಯಯನ, ಶಿಕ್ಷಣ, ಆರೋಗ್ಯ, ಅರಿವು ಕಾರ್ಯಕ್ರಮಗಳು ಸೇರಿದಂತೆ ಇನ್ನಿತರೆ ಹಲವು ಉದ್ದೇಶಗಳನ್ನು ಹೊಂದಿದೆ.
ಆದರೆ ರಾಜ್ಯದಲ್ಲಿನ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದೆ. ಈಗಿರುವಾಗ ಸಂಶೋಧನಾ ಸಂಸ್ಥೆ ನಿರ್ದೇಶಕ ಶ್ರೀನಿವಾಸ್ ಅವರು ಬುಡಕಟ್ಟು ಜನರ ಅನುದಾನವನ್ನು ಸ್ವ ಪಕ್ಷೀಯ ಕಂಪನಿಗೆ ಬಿಡುಗಡೆ ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಸರ್ಕಾರ ಗಮನಹರಿಸಿ ಅನುದಾನ ಬಿಡುಗಡೆಗೆ ತಡೆ ನೀಡಬೇಕು. ಜತೆಗೆ ವಿವಿಧ ಯೋಜನೆಯಡಿ ಬಳಕೆಯಾಗಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.