ಎಲ್ಲೆಂದರಲ್ಲಿ ಕಸದ ರಾಶಿ

Published on

ಹನೂರು: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಳೆದ 8 ತಿಂಗಳಿನಿಂದಲೂ ಕಸದ ರಾಶಿ ತಾಂಡವವಾಡುತ್ತಿದ್ದು, ಈ ಬಗ್ಗೆ ನಿವಾಸಿಗಳಿಂದ ಆಕ್ಷೇಪ ಕೇಳಿ ಬರುತ್ತಿದ್ದರೂ ಪಟ್ಟಣ ಪಂಚಾಯಿತಿ ಆಡಳಿತ ವಿಲೇವಾರಿಗೆ ಕ್ರಮವಹಿಸದೆ ನಿರ್ಲಕ್ಷ್ಯ ತೋರಿದೆ.

ಹನೂರು ಪಟ್ಟಣ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಇಲ್ಲಿ 13 ವಾರ್ಡ್‌ಗಳಿದ್ದು, ಸುಮಾರು 12 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಆದರೆ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಾಗ್ಗೆ ತಲೆದೋರುತ್ತಲೇ ಇದೆ. ಬೀದಿ ದೀಪದ ವ್ಯವಸ್ಥೆ ಸರಿಯಾಗಿಲ್ಲ. ಕಚೇರಿಯಲ್ಲಿ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಲೇ ಇದ್ದಾರೆ. ಈಗಿರುವಾಗ ಪಪಂ ಆಡಳಿತ ಕಳೆದ 8 ತಿಂಗಳಿನಿಂದ ಕಸ ವಿಲೇವಾರಿ ಮಾಡದೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಬಹುತೇಕ ವಾರ್ಡ್‌ಗಳಲ್ಲಿ ಕಸದ ರಾಶಿ ತಾಂಡವಾಡುತ್ತಿದ್ದು, ದುರ್ನಾತ ಬೀರುತ್ತಿದೆ. ಇದರಿಂದ ಹನೂರು ಅನೈರ್ಮಲ್ಯದ ತಾಣವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಈ ಹಿಂದೆ ನಡೆದ ಸಭೆಗಳಲ್ಲಿ ಸದಸ್ಯರು ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಇತ್ತ ಸಾರ್ವಜನಿಕರು ಸಹ ಪಪಂ ಅಧಿಕಾರಿಗಳಿಗೆ ದೂರಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

ಎಲ್ಲೆಡೆ ಅನೈರ್ಮಲ್ಯ: ಪಟ್ಟಣದ ಆಂಜನೇಯಸ್ವಾಮಿ ದೇಗುಲ ಸಮೀಪದ ತಟ್ಟೆಹಳ್ಳದ ಬಳಿ, ಲೊಕ್ಕನಹಳ್ಳಿ, ಬಂಡಳ್ಳಿಗೆ ತೆರಳುವ ಮುಖ್ಯರಸ್ತೆಯ ಬದಿ, ವಿನಾಯಕನಗರ, ಮಾರುತಿನಗರ, ವಿವೇಕನಗರ, ಮುಸ್ಲಿಂ ಜನಾಂಗದ ಸ್ಮಶಾನದ ಬಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಸದ ರಾಶಿ ಕಳೆದ 8 ತಿಂಗಳಿನಿಂದಲೂ ಬಿದ್ದಿದೆ. ಮಳೆ ಬಂದ ವೇಳೆ ಕಸದ ರಾಶಿ ದುರ್ವಾಸನೆ ಬೀರುತ್ತಿದೆ. ಪರಿಣಾಮ ಇದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಇದೆ. ಜತೆಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಜಾನುವಾರುಗಳು ತಿನ್ನುತ್ತಿದ್ದು, ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸಿದೆ. ನಾಯಿಗಳು ಕೂಡ ಕಸದ ರಾಶಿಯನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಅಶುಚಿತ್ವದಿಂದಾಗಿ ನಿವಾಸಿಗಳು ರಾತ್ರಿ ವೇಳೆ ಸೊಳ್ಳೆಗಳ ಕಾಟ ಅನುಭವಿಸುವಂತಾಗಿದ್ದು, ರೋಗ ರುಜಿನಗಳ ಭೀತಿ ಕಾಡುತ್ತಿದೆ. ಆದರೆ ಪಪಂ ಆಡಳಿತ ಕಸ ವಿಲೇವಾರಿಗೊಳಿಸಲು ಮುಂದಾಗಿಲ್ಲ.
ರಸ್ತೆ ಬದಿಗಷ್ಟೇ ಸೀಮಿತ: ಪಪಂನಲ್ಲಿ ಕಸ ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಸೇರಿದಂತೆ 4 ವಾಹನಗಳಿವೆ. ಪಟ್ಟಣದಲ್ಲಿ ಸಂಗ್ರಹವಾದ ಕಸವನ್ನು ಹುಲುಸುಗುಡ್ಡೆಯ ಬಳಿಯಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತದೆ. ಪಟ್ಟಣದಲ್ಲಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಹಾಗೂ ಮುಖ್ಯರಸ್ತೆ ಬದಿಯಲ್ಲಿ ಸಂಗ್ರಹವಾದ ಕಸವನ್ನು ಮಾತ್ರ ನಿತ್ಯ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಬಡಾವಣೆಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.

ರಸ್ತೆ ಬದಿಯೇ ಹಾಕಬೇಕು:
ಕಸ ಸಂಗ್ರಹಿಸುವ ವಾಹನಗಳು ಬೀದಿಗಳಿಗೆ ಕಾಲಕಾಲಕ್ಕೆ ಬರುತ್ತಿಲ್ಲ. ಒಂದು ವೇಳೆ ಬಂದರೂ ಮನೆಯಿಂದ ಕಸ ತೆಗೆದುಕೊಂಡು ಬರುವಷ್ಟರಲ್ಲಿ ವಾಹನವು ತೆರಳಿರುತ್ತದೆ. ಇನ್ನು ಒಂದು ಬಾರಿ ಕಸ ಭರ್ತಿಯಾದ ವಾಹನ ಮತ್ತೊಮ್ಮೆ ಬರುವುದಿಲ್ಲ. ಹಾಗಾಗಿ ನೆಪ ಮಾತ್ರಕ್ಕಷ್ಟೇ ಈ ವಾಹನಗಳು ಸಂಚರಿಸುತ್ತಿವೆ. ಇತ್ತ ಪಪಂ ಆಡಳಿತ ಎಲ್ಲಿಯೂ ಕಸದ ತೊಟ್ಟಿ (ಡಸ್ಟ್ ಬಿನ್) ಇಡದ ಪರಿಣಾಮ ಜನರು ವಿಧಿಯಿಲ್ಲದೆ ರಸ್ತೆ ಬದಿಯಲ್ಲಿಯೇ ಕಸ ಸುರಿಯಬೇಕಾದ ಸ್ಥಿತಿ ಇದೆ. ಪಪಂ ವತಿಯಿಂದ ಆಗಾಗ್ಗೆ ಘನತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಮೂಲಕ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಲಾಗುತ್ತಿದೆ. ಆದರೆ ಪಟ್ಟಣದಲ್ಲಿ ಬಿದ್ದಿರುವ ಕಸದ ರಾಶಿಯನ್ನು ತೆರವುಗೊಳಿಸದಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪಪಂ ಆಡಳಿತ ಇನ್ನಾದರೂ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದರ ಮೂಲಕ ಪಟ್ಟಣದಲ್ಲಿ ಶುಚಿತ್ವ ಕಾಪಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಳೆದ ಹಲವು ತಿಂಗಳಿನಿಂದ ಕಸದ ರಾಶಿ ಬಿದ್ದಿದ್ದು, ಅಶುಚಿತ್ವ ನಿರ್ಮಾಣವಾಗಿದೆ. ಈ ಬಗ್ಗೆ ಪಪಂ ಅಧಿಕಾರಿಗಳಿಗೆ ತಿಳಿದಿದೆ. ಆದರೆ ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸಬೇಕಿದೆ.ಬಸವರಾಜು, 4ನೇ ವಾರ್ಡ್‌ನ ನಿವಾಸಿ

ಪಪಂನಲ್ಲಿ ಕಾಯಂ ಆರೋಗ್ಯಾಧಿಕಾರಿ ಇಲ್ಲ. ಜತೆಗೆ ಪೌರ ಕಾರ್ಮಿಕರ ಕೊರತೆ ಇದೆ. ಹಾಗಾಗಿ ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ತೊಡಕಾಗಿ ಪರಿಣಮಿಸಿದೆ. ಆದಾಗ್ಯೂ ಕಸ ವಿಲೇವಾರಿಗೆ ಅಗತ್ಯ ಕ್ರಮವಹಿಸಲಾಗುವುದು.ಮಹೇಶ್‌ಕುಮಾರ್, ಮುಖ್ಯಾಧಿಕಾರಿ ಹನೂರು ಪಪಂ

ದೊಮ್ಮನಗದ್ದೆ ಗ್ರಾಮದಲ್ಲಿ ಹಳೆಯದಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಕ್ರಿಯಾಯೋಜನೆ ತಯಾರಿಸಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲು ಅಗತ್ಯ ಕ್ರಮವಹಿಸಲಾಗುವುದು.ಶಂಕರ್, ಎಇಇ ಸೆಸ್ಕ್ ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net