ಯುವ ರೈತನ ಕೃಷಿ ಯಶೋಗಾಥೆ

2
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಪದವೀಧರನೊಬ್ಬ ಖಾಸಗಿ ಸಂಸ್ಥೆಯ ಉದ್ಯೋಗ ತ್ಯಜಿಸಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡು ಅಧಿಕ ಲಾಭ ಗಳಿಸುತ್ತಿದ್ದಾರೆ.

ಗ್ರಾಮದ ಪಾರ್ವತಿ ಮತ್ತು ಸೋಮಣ್ಣ ದಂಪತಿ ಪುತ್ರ ಮನೋಹರ್ ಕೃಷಿಯಲ್ಲಿ ಯಶಸ್ಸು ಕಂಡ ಯುವ ರೈತ. ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಗ್ರಾಮದಲ್ಲೇ ಪಡೆದ ಇವರು 2011ರಲ್ಲಿ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಸಾಮಾಜಿಕ ಕಾರ್ಯ (ಬಿಎಸ್‌ಡಬ್ಲುೃ) ವಿಷಯದಲ್ಲಿ ಪದವಿ ಪಡೆದರು. ಬಳಿಕ ಬೆಂಗಳೂರು ಗ್ರಾಮೀಣ ಕೂಟ ಹಾಗೂ ಮೈರಾಡ ಸಂಸ್ಥೆಯಲ್ಲಿ ಉದ್ಯೋಗ ಪಡೆದು ಒಂದು ವರ್ಷ ಕಾರ್ಯನಿರ್ವಹಿಸಿದರು. ಆದರೆ ಕೆಲಸದ ಒತ್ತಡ ಹಾಗೂ ಕಡಿಮೆ ಸಂಬಳದಿಂದ ಬೇಸತ್ತು ವೃತ್ತಿಯನ್ನು ತ್ಯಜಿಸಿ ಗ್ರಾಮಕ್ಕೆ ವಾಪಸ್ ಬಂದರು. ಬಾಲ್ಯದಿಂದಲೇ ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದ ಇವರು ತಂದೆ, ತಾಯಿಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಕಾಲಕ್ರಮೇಣ ಸಂಪೂರ್ಣ ಕೃಷಿಯಲ್ಲೇ ತೊಡಗಿಸಿಕೊಂಡರು. ವ್ಯವಸಾಯದಲ್ಲಿ ಉತ್ತಮ ಅನುಭವ ಪಡೆದ ಇವರು ವಿವಿಧ ಬೆಳೆಗಳನ್ನು ಬೆಳೆಯುವುದರ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡರು. ಜತೆಗೆ ಹೈನುಗಾರಿಕೆಯತ್ತಲೂ ಮುಂಚೂಣಿಯತ್ತ ಸಾಗುತ್ತಿದ್ದು, ಈ ಭಾಗದ ಯುವಕರಿಗೆ ಮಾದರಿ ರೈತ ಎನಿಸಿಕೊಂಡಿದ್ದಾರೆ.

ತಮ್ಮ ವೃತ್ತಿಯನ್ನು ತೊರೆದು ಕೃಷಿ ಕಾಯಕದಲ್ಲಿ ತೊಡಗಿದ ಇವರು ನಿರ್ದಿಷ್ಟ ಗುರಿಯೊಂದಿಗೆ ದೃಢ ನಿರ್ಧಾರದಿಂದ ಕೃಷಿಯಲ್ಲಿ ಯಶಸ್ಸು ಗಳಿಸಿದ್ದಾರೆ. ಇತರರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವಂತ ಬಲದ ಮೇಲೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ಆರಂಭದಲ್ಲಿ ಎದುರಾದ ನಷ್ಟ: ವೃತ್ತಿಯನ್ನು ತ್ಯಜಿಸಿ ಕೃಷಿ ಕಾಯಕಕ್ಕೆ ಧುಮುಕಿದ ಇವರು ಪಿತ್ರಾರ್ಜಿತ ಸ್ವತ್ತಾದ ಮೂರೂವರೆ ಎಕರೆಯಲ್ಲಿ ಆಲೂಗಡ್ಡೆ, ಈರುಳ್ಳಿ ಹಾಗೂ ಮುಸುಕಿನ ಜೋಳ ಬೆಳೆದರು. ಆದರೆ, ಬಾವಿಯಲ್ಲಿ ನೀರಿನ ಕೊರತೆಯಿಂದ ಫಸಲಿನಲ್ಲಿ ನಷ್ಟವನ್ನು ಎದುರಿಸಿದರು. ಆದರೆ, ಕೃಷಿಯಲ್ಲಿ ಯಶಸ್ಸು ಗಳಿಸಬೇಕು ಎಂದು ದೃಢ ನಿರ್ಧಾರ ಹೊಂದಿ ಕೊಳವೆ ಬಾವಿ ಕೊರೆಸಿ ಕೃಷಿಗೆ ಹೆಚ್ಚಿನ ಒತ್ತು ನೀಡಿದರು. ಹನಿ ನೀರಾವರಿ ವ್ಯವಸ್ಥೆಯ ಮೂಲಕ ಮೇಕೆ ಗೊಬ್ಬರ ಹಾಗೂ ಸಾವಯವ ಗೊಬ್ಬರವನ್ನು ಬಳಸಿ ಬಾಳೆ, ಈರುಳ್ಳಿ, ಆಲೂಗಡ್ಡೆ ಹಾಗೂ ಮುಸುಕಿನ ಜೋಳದಲ್ಲಿ ಉತ್ತಮ ಇಳುವರಿ ಪಡೆದು ಲಾಭ ಗಳಿಸಿದರು ಜಡೇಸ್ವಾಮಿ ದೊಡ್ಡಿಯ ಬಳಿ 4 ಎಕರೆಯನ್ನು ಗುತ್ತಿಗೆ ಪಡೆದಿದ್ದು, ಪ್ರಸ್ತುತ ಬಾಳೆಯನ್ನು ಬೆಳೆದಿದ್ದಾರೆ. ವಾರ್ಷಿಕವಾಗಿ ಉತ್ತಮ ಆದಾಯ ಗಳಿಸುವುದರ ಮೂಲಕ ನೆಮ್ಮದಿ ಜೀವನವನ್ನು ರೂಪಿಸಿಕೊಂಡಿದ್ದಾರೆ.

ಮೇಕೆ ಸಾಕಣೆ: ಕಳೆದ 10 ವರ್ಷಗಳಿಂದ ಕೃಷಿಯಲ್ಲಿ ತೊಡಗಿರುವ ಇವರು ಕೃಷಿಯ ಜತೆಗೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಿದ್ದಾರೆ. ಆರಂಭದಲ್ಲಿ 4 ಮೇಕೆಗಳನ್ನು ಸಾಕಣೆ ಮೂಲಕ ಆರಂಭಿಸಿದ ಹೈನುಗಾರಿಕೆಯಲ್ಲಿ ಪ್ರಸ್ತುತ 80 ಮೇಕೆಗಳನ್ನು ಹೊಂದಿದ್ದಾರೆ. ಇವುಗಳ ಸಾಕಣೆಗೆ ಪ್ರತ್ಯೇಕ ಶೆಡ್ ನಿರ್ಮಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಮೇಕೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಜತೆಗೆ 5 ಹಸುಗಳನ್ನು ಹೊಂದಿದ್ದು, ಹಾಲಿನಿಂದ ಉತ್ತಮ ಆದಾಯವು ಬರುತ್ತಿದೆ.

5-8 ಸಾವಿರ ರೂ.ಗೆ ಕೋಳಿ ಮಾರಾಟ: ಆದಾಯ ವೃದ್ಧಿಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಬಾಜಿಗಾಗಿ ಬಳಸುವ ಕೋಳಿ ಸಾಕಣೆ ಮಾಡಲು ಆರಂಭಿಸಿದ್ದು, ಪ್ರತ್ಯೇಕ ಶೆಡ್ ನಿರ್ಮಿಸಿದ್ದಾರೆ. ಪ್ರಸ್ತುತ 100ಕ್ಕೂ ಹೆಚ್ಚು ಕೋಳಿಗಳಿವೆ. ಇವುಗಳನ್ನು ತಮಿಳುನಾಡು ಸೇರಿದಂತೆ ಉಡುಪಿ ಹಾಗೂ ಮಂಗಳೂರು ಭಾಗದವರು ಖರೀದಿಸುತ್ತಾರೆ. ಈ ಕೋಳಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿರುವುದರಿಂದ ದಷ್ಟ ಪುಷ್ಟವಾಗಿದ್ದು, ಕುಸ್ತಿ ಆಡಿಸಲು ಈ ಕೋಳಿಗಳಿಗೆ ಉತ್ತಮ ಬೇಡಿಕೆ ಇದೆ. ಹಾಗಾಗಿ ಪ್ರತಿ ಕೋಳಿಯನ್ನು 5- 8 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ತಮ ಆದಾಯ ಬರುತ್ತಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದಾರೆ.

ಕುಟುಂಬಸ್ಥರ ಸಾಥ್: ಇವರ ತಂದೆ, ತಾಯಿ ಹಾಗೂ ಪತ್ನಿ ರಂಜಿತಾ ಕೃಷಿ ಕಾಯಕಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಕುಟುಂಬ ವರ್ಗವೂ ಮನೋಹರ್ ಅವರ ಕೃಷಿ ಯಶಸ್ಸಿಗೆ ಪ್ರಮುಖ ಕಾರಣ ಎನ್ನಬಹುದು.

ಬಾಲ್ಯದಿಂದಲೂ ಕೃಷಿಯ ಬಗ್ಗೆ ಆಸಕ್ತಿ ಇತ್ತು. ಹಾಗಾಗಿ ಕಡಿಮೆ ಸಂಬಳ ಹಾಗೂ ಕೆಲಸದ ಒತ್ತಡದಿಂದ ಉದ್ಯೋಗ ತ್ಯಜಿಸಿ ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡೆ. ಇದೀಗ ಇದರಿಂದ ಉತ್ತಮ ಆದಾಯ ಬರುತ್ತಿದ್ದು, ನೆಮ್ಮದಿಯಿಂದ ಜೀವನ ಸಾಗುತ್ತಿದೆ. ಕುಟುಂಬಸ್ಥರು ಸದಾ ಬೆನ್ನೆಲುಬಾಗಿ ನಿಂತಿದ್ದು, ಕೃಷಿ ಕಾಯಕಕ್ಕೆ ಉತ್ತೇಜನ ನೀಡುತ್ತಿದ್ದಾರೆ.ಮನೋಹರ್, ಯುವ ರೈತ ಲೊಕ್ಕನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net