

ಹನೂರು: ಎಪ್ಪತ್ತೇಳು ಬೆಟ್ಟಗಳ ಸಾಲಿನಲ್ಲಿ 3 ತಿಂಗಳ ಹಿಂದೆ ಲೋಕಾರ್ಪಣೆಗೊಂಡ 108 ಅಡಿ ಎತ್ತರದ ಮಾಯ್ಕರ ಮಾದಪ್ಪ ಮೂರ್ತಿಯನ್ನು ಹತ್ತಿರದಿಂದ ನೋಡುವ ಭಾಗ್ಯ ಭಕ್ತರಿಗಿಲ್ಲ…!
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಶ್ರೀ ಮಹದೇಶ್ವರರ ಪ್ರತಿಮೆ ಪೂರ್ಣಗೊಂಡಿದೆ. ಆದರೆ ಉಳಿದ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ತರಾತುರಿಯಲ್ಲಿ ಉದ್ಘಾಟನೆ: ಶ್ರೀ ಮಹದೇಶ್ವರರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಗುಹೆಯ ಒಳಗೆ ಮಹದೇಶ್ವರರ ಜೀವನ ಚರಿತ್ರೆ, ಗೀತಾ ಗಾಯನಗಳು, ಸ್ವಾಮಿಯ ವಿವಿಧ ಅವತಾರದ ಮೂರ್ತಿಗಳು ಪವಾಡ ಸೃಷ್ಟಿಸಿದ ಇತಿಹಾಸ ಹಾಗೂ ಸ್ವಾಮಿಯ ಬಗ್ಗೆ ಆಡಿಯೋ, ವಿಡಿಯೋಗಳನ್ನು ಪ್ರದರ್ಶಿಸುವ ಕಾರ್ಯ ಪೂರ್ಣಗೊಂಡಿಲ್ಲ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಸಮರ್ಪಕ ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲ.
ಈಗಿದ್ದರೂ ಕಳೆದ ಮಾ.18 ರಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಬಳಿಕ 12 ದಿನಗಳು ಮಾತ್ರ ಪ್ರತಿಮೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಆದರೆ ಪ್ರತಿಮೆ ವೀಕ್ಷಣೆಗೆ ತೆರಳುವ ಮಾರ್ಗದಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಪ್ರಾಧಿಕಾರದ ಆಡಳಿತ ಏ.1ರಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, 3 ತಿಂಗಳು ಕಳೆದಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಪರಿಣಾಮ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ಪ್ರತಿಮೆಯನ್ನು ದೂರದಿಂದಲೇ ನಿಂತು ವೀಕ್ಷಿಸಿ ವಾಪಸ್ ಹೋಗುವಂತಾಗಿದೆ.
ಕಲ್ಲಿನ ತಡೆಗೋಡೆ ಕುಸಿತ: ಎರಡು ತಿಂಗಳ ಹಿಂದೆ ಸುರಿದ ಜೋರು ಮಳೆಗೆ ಪ್ರತಿಮೆಯ ತಳಪಾಯದಲ್ಲಿ ನಿರ್ಮಿಸಲಾಗಿದ್ದ ಕಲ್ಲಿನ ತಡೆಗೋಡೆ ಕುಸಿದಿತ್ತು. ಜತೆಗೆ ಆಗಾಗ್ಗೆ ಸುರಿಯುವ ಮಳೆಗೆ ಮಣ್ಣು ಸಹ ಕುಸಿಯುತ್ತಿದೆ. ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮಣ್ಣಿನ ರಸ್ತೆಯಲ್ಲಿ ಮಳೆ ಅಬ್ಬರಕ್ಕೆ ಕೊರಕಲು ನಿರ್ಮಾಣವಾಗಿದೆ. ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ.
ಭಕ್ತರಿಂದ ಆಕ್ಷೇಪ, ಪ್ರತಿಭಟನೆ: ಶ್ರೀ ಮಹದೇಶ್ವರರ ಪ್ರತಿಮೆ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸದೆ ಲೋಕಾರ್ಪಣೆ ಮಾಡಿ, ಇದೀಗ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಎಂದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಜು.9 ರಂದು ಜಿಲ್ಲಾ ಕಬ್ಬು ಬೆಳೆಗಾರರ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜು ನೇತೃತ್ವದಲ್ಲಿ ರೈತರು ರಸ್ತೆ ಸಂಚಾರ ನಡೆಸಿ ಪ್ರತಿಭಟನೆ ನಡೆಸಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರತಿಮೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರನ್ನು ಒತ್ತಾಯಿಸಿದ್ದಾರೆ.
ಪ್ರತಿ ತಿಂಗಳು ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದು, ಮಾದಪ್ಪನ ಪ್ರತಿಮೆಯನ್ನು ವೀಕ್ಷಿಸಬೇಕೆಂಬ ಆಸೆ. ಸ್ಥಳಕ್ಕೆ ಹೋದಾಗಲೆಲ್ಲ ಕಾಮಗಾರಿ ನಡೆಯುತ್ತಿದೆ. ಭಕ್ತರಿಗೆ ಪ್ರವೇಶವಿಲ್ಲ ಎಂದು ಹೇಳುತ್ತಾರೆ. ಕಾಮಗಾರಿ ಪೂರ್ಣಗೊಳ್ಳದೇ ಲೋಕಾರ್ಪಣೆ ಮಾಡಿರುವುದು ಎಷ್ಟ ಮಟ್ಟಿಗೆ ಸರಿ? ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.-ಮಂಜುನಾಥ್, ಭಕ್ತ, ನಂಜನಗೂಡು. ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರವೇಶ ನಿರ್ಬಂಧಿಸಿರುವುದರಿಂದ ಭಕ್ತರಲ್ಲಿ ನಿರಾಸೆ ಮೂಡಿರುವುದು ನನ್ನ ಗಮನಕ್ಕೂ ಬಂದಿದೆ. ಸದ್ಯದಲ್ಲಿಯೇ ಪ್ರಾಧಿಕಾರದ ಸಭೆ ಕರೆದು ಚರ್ಚಿಸಿ ಜವಾಬ್ದಾರಿ ಹೊತ್ತವರಿಗೆ ಗಡುವು ನೀಡಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸವಂತೆ ತಾಕೀತು ಮಾಡಲಾಗುವುದು.-ಗೀತಾ ಹುಡೇದ, ಕಾರ್ಯದರ್ಶಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.