ರಸ್ತೆ ಕಾಮಗಾರಿಗೆ ಭೂಮಿಪೂಜೆ

11 HANUR 3
Published on

ಹನೂರು: ತಾಲೂಕಿನ ಹುಲುಸುಗುಡ್ಡೆ ಸಮೀಪದ ಮಂಗಲ ಏಕಲವ್ಯ ಮಾದರಿ ವಸತಿ ಶಾಲೆಯ ಮುಖ್ಯರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಏಕಲವ್ಯ ಶಾಲೆಗೆ ಮ.ಬೆಟ್ಟದ ಮುಖ್ಯರಸ್ತೆಯಿಂದ ಹುಲುಸುಗುಡ್ಡೆಯ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಈ ರಸ್ತೆಯಲ್ಲಿ ಅರ್ಧಕ್ಕೆ ಮಾತ್ರ ಡಾಂಬರೀಕರಣಗೊಳಿಸಲಾಗಿದೆ. ಉಳಿದ 2 ಕಿ.ಮೀ. ರಸ್ತೆಯು ಮೆಟ್ಲಿಂಗ್ ರಸ್ತೆಯಿಂದ ಕೂಡಿದ್ದು, ಸಂಪೂರ್ಣ ಹಾಳಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಈ ಭಾಗದ ರೈತರಿಗೆ ಮಳೆಗಾಲದ ವೇಳೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ. ಇದನ್ನು ಮನಗಂಡು 3.83 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿ ಜವಾಬ್ದಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆಯವರು ಗುಣಮಟ್ಟ ಕಾಯ್ದುಕೊಳ್ಳುವುದರ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಉಮಾ, ಜೆಇಗಳಾದ ಶೋಭಾ, ಕಾರ್ತಿಕ್, ಮುಖಂಡರಾದ ಮಂಗಲ ಚಿಕ್ಕಸ್ವಾಮಿ, ರಾಜಣ್ಣ, ಮಂಜೇಶ್, ವೀರಭದ್ರ, ಸಾಹಿಲ್, ಅಮಿನ್, ಚಿನ್ನವೆಂಕಟ, ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net