

ಹನೂರು: ಕ್ಷೇತ್ರದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದರ ಮೂಲಕ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿಗೃಹದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಾಗಿ ಆಯಾ ಇಲಾಖಾ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿ ತಯಾರಿಸಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಜತೆಗೆ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿರುವುದರಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ತಿಳಿಸಿದರು.
ಬೆಳೆ ಹಾನಿಗೆ ಶೀಘ್ರ ಪರಿಹಾರ: ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಅಧಿಕಾರಿಗಳಿಗೆ ಸೂಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ಒದಗಿಸಲಾಗುವುದು. ಅಲ್ಲದೆ ಹಾನಿಯಾಗಿರುವ ಬಾಳೆ ಫಸಲಿಗೆ ಇಲಾಖೆಯಿಂದ ದೊರಕುವ ಪರಿಹಾರ ಕಡಿಮೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು. ಇನ್ನು ಬಂಡಳ್ಳಿ ಹಾಗೂ ಲೊಕ್ಕನಹಳ್ಳಿ ಮಾರ್ಗದಲ್ಲಿನ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಶ್ರೀನಿವಾಸ್, ಸಿಡಿಪಿಒ ನಾಗೇಶ್, ಪಪಂ ಮುಖ್ಯಾಧಿಕಾರಿ ಮಹೇಶ್, ಪಿಡಬ್ಲುೃಡಿ ಎಇಇಗಳಾದ ರಾಜೇಶ್ ಮುನ್ಸಿ, ಚಿನ್ನಣ್ಣ, ನಿರ್ಮಿತಿ ಕೇಂದ್ರದ ಎಇಇ ರವಿಕುಮಾರ್, ಎಇ ಮಹದೇವಶೆಟ್ಟಿ, ಕೆ-ಶಿಪ್ ಎಇಇ ರಾಜು ಹಾಗೂ ಇತರರು ಇದ್ದರು.
ಸನ್ಮಾನ:ಸಭೆಯ ಬಳಿಕ ವಿವಿಧ ಗ್ರಾಮಗಳಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕ ಎಂ.ಆರ್ ಮಂಜುನಾಥ್ ಅವರನ್ನು ಸನ್ಮಾನಿಸಿದರು. ಈ ವೇಳೆ ಕಾರ್ಯಕರ್ತರು ತಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಸಮಸ್ಯೆಗಳ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.