ಅರ್ಹರು ಯೋಜನೆಯಿಂದ ವಂಚಿತರಾಗದಿರಲಿ

20 HANUR 1 A
Published on

ಹನೂರು: ಗೃಹಲಕ್ಷ್ಮೀ ಯೋಜನೆ ಕಡು ಬಡವರಿಗೆ ಅನುಕೂಲವಾಗಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಎಲ್ಲೇಮಾಳ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಗುರುವಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಲಿದೆ. ಪ್ರತಿ ತಿಂಗಳು ಮನೆ ಯಜಮಾನಿಗೆ 2 ಸಾವಿರ ರೂ. ದೊರಕುವುದರಿಂದ ಮನೆ ಜವಾಬ್ದಾರಿ ನಿಭಾಯಿಸಲು ಸಹಕಾರಿ. ಹಾಗಾಗಿ ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಅರ್ಹರು ಈ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮದ ವೆಂಕಟಲಕ್ಷ್ಮಮ್ಮ ಎಂಬವರು ಮಾತನಾಡಿ, ಒಂದೂವರೆ ವರ್ಷದಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಸ್ಥಳದಲ್ಲಿದ್ದ ಆಹಾರ ನಿರೀಕ್ಷಕ ಬಸವರಾಜು ಅವರಿಗೆ ಅಗತ್ಯ ಕ್ರಮವಹಿಸಿ ಸಮಸ್ಯೆ ಬಗೆಹರಿಸುವಂತೆ ಶಾಸಕರು ಸೂಚಿಸಿದರು. ಗ್ರಾಪಂ ಸದಸ್ಯರಾದ ಇಮ್ತಾಜ್ ಬೇಗಂ, ಚಿಕ್ಕವೆಂಕಟೇಗೌಡ, ಸುರೇಶ್, ತಹಸೀಲ್ದಾರ್ ಧನಂಜಯ, ಆರ್‌ಐ ಮಹದೇವಸ್ವಾಮಿ, ಪಿಡಿಒ ಮಂಜುನಾಥ್, ಮುಖಂಡರಾದ ನಾಗೇಶ್, ಮಾದಪ್ಪ, ಮಂಜೇಶ್ ಇತರರು ಇದ್ದರು.

ಹನೂರಿನಲ್ಲೂ ಚಾಲನೆ: ಬಳಿಕ ಹನೂರಿನ ಪಟ್ಟಣ ಪಂಚಾಯಿತಿ ಸಂಕೀರ್ಣದಲ್ಲಿ ಯೋಜನೆಯ ನೋಂದಣಿಗೆ ಶಾಸಕರು ಚಾಲನೆ ನೀಡಿದರು. ಈ ವೇಳೆ ಸದಸ್ಯರಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೈಜೋಡಿಸುವಂತೆ ಮನವಿ ಮಾಡಿದರು.
ನೀರಿನ ಸಮಸ್ಯೆ ನಿವಾರಿಸಿ: ಇದೇ ವೇಳೆ ಹಾಜರಿದ್ದ ಮಹಿಳೆಯರು ಮಾತನಾಡಿ, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಆಗಾಗ್ಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ವಿದ್ಯುತ್ ಕಂಬಗಳಿಗೆ ದೀಪ ಅಳವಡಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪಪಂ ಸದಸ್ಯರು ದೂರಿದರು. ಈ ಸಂಬಂಧ ಕೂಡಲೇ ಅಗತ್ಯ ಕ್ರಮ ವಹಿಸುವಂತೆ ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಅವರಿಗೆ ಶಾಸಕರು ಸೂಚಿಸಿದರು.
ಪಪಂ ಸದಸ್ಯರಾದ ಮಮ್ತಾಜ್ ಬಾನು, ಮಂಜುಳಾ, ಗಿರೀಶ್, ಸುದೇಶ್, ಆನಂದ್, ಸಂಪತ್‌ಕುಮಾರ್, ಸೋಮಶೇಖರ್, ಹರೀಶ್‌ಕುಮಾರ್, ಮಹೇಶ್‌ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net