

ಹನೂರು:ತಾಲೂಕಿನ ಕಗ್ಗಲಿಗುಂದಿ ಗಿರಿಜನರ ಗ್ರಾಮದಲ್ಲಿ ಮಂಗಳವಾರ ಕಾಮಗೆರೆ (ಕೊಂಗರಹಳ್ಳಿ) ಗ್ರಾಮದ ಜಮೀನಿನಲ್ಲಿದ್ದ ಎರಡು ಹಸುವನ್ನು ಕೊಂದು ಹಾಕಿದೆ. ಬಾಲಕಿಯ ಸಾವಿಗೆ ಕಾರಣವಾಗಿದ್ದ ಚಿರತೆ ಇದಾಗಿರಬಹುದೆಂದು ಶಂಕಿಸಲಾಗಿದ್ದು, ಇದು ಜನರಲ್ಲಿ ತಲ್ಲಣ ಮೂಢಿಸಿದೆ.
ಕಗ್ಗಲಿಗುಂದಿ ಗ್ರಾಮದಲ್ಲಿ ಜೂ.26ರ ರಾತ್ರಿ 8.30ರಲ್ಲಿ ಚಿರತೆ ದಾಳಿಗೆ ಒಳಗಾಗಿ ಗಾಯಗೊಂಡಿದ್ದ 6 ವರ್ಷದ ಬಾಲಕಿ ಜು.14 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಈ ವೇಳೆ ಗ್ರಾಮಕ್ಕಾಗಮಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಡಿಸಿಎಫ್ ದೀಪಾ ಜೆ. ಕಂಟ್ರಾಕ್ಟರ್ ಅವರನ್ನು ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಇದಕ್ಕೂ ಮೊದಲೇ ಮಧುವನಹಳ್ಳಿ ಸಮೀಪದ ಸಿದ್ಧೇಶ್ವರ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ವೈರಲ್ ಆಗಿತ್ತು. ಇದರಿಂದ ಬಾಲಕಿಯನ್ನು ಕೊಂದ ಚಿರತೆ ಇದೆ ಇರಬೇಕೆಂದು ತಿಳಿದ ಅರಣ್ಯ ಇಲಾಖೆ, ಸಿದ್ಧೇಶ್ವರ ಬೆಟ್ಟ ಸಮೀಪದಲ್ಲಿ ಬೋನು ಇರಿಸಿತ್ತು. ಅದರಂತೆ ಜು.16 ರಂದು ಚಿರತೆ ಸೆರೆಯಾಗಿತ್ತು. ಸೆರೆಯಾದ ಚಿರತೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕ್ಯಾಮರಾ ಟ್ರ್ಯಾಪಿಂಗ್‌ನಲ್ಲಿ ಸೆರೆಯಾದ ಫೋಟೋಗೂ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಬಾಲಕಿ ಸಾವಿಗೆ ಕಾರಣವಾದ ಚಿರತೆ ಇದೆಯೇ ಎಂಬುದು ದೃಢಪಟ್ಟಿರಲಿಲ್ಲ. ಇದರಿಂದ ಸಂಶಯಗೊಂಡ ಅರಣ್ಯ ಇಲಾಖೆ ಚಿರತೆ ಸೆರೆಯ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.
ಆದರೆ ಸೋಮವಾರ ರಾತ್ರಿ ಕಾಮಗೆರೆ ಗ್ರಾಮದಿಂದ ಗುಂಡಾಲ್ ಜಲಾಶಯಕ್ಕೆ ತೆರಳುವ ಮಾರ್ಗದಲ್ಲಿನ ದೊಡ್ಡಪಾದಪ್ಪನ ಗುಡಿ ಸಮೀಪದ ಭರತ್ ಎಂಬುವರ ಜಮೀನಿನ ಕೊಟ್ಟಿಗೆಯಲ್ಲಿದ್ದ 2 ಹಸುಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಇದರಲ್ಲಿ ಒಂದು ಹಸುವನ್ನು ತಿಂದು ಅಲ್ಲಿಯೇ ಬಿಸಾಡಿದ್ದು, ಬೆಳಗ್ಗೆ ಇದನ್ನು ತಿಳಿದ ಜಮೀನಿನ ನೌಕರರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಹನೂರು ಭಪರ್ ವಲಯ ಹಾಗೂ ಬಿಆರ್‌ಟಿಯ ಅಧಿಕಾರಿಗಳು ಪರಿಶೀಲಿಸಿದರು.
ಬೃಹತ್ ಬೋನು ಅಳವಡಿಕೆ:ಬಳಿಕ ಚಿರತೆ ಸೆರೆಗೆ ಜಮೀನಿನಲ್ಲಿಯೇ ಬೃಹತ್ ಆಕಾರದ ಜಂಬೋ ಬೋನು ಇರಿಸಲಾಗಿದ್ದು, ಅದರಲ್ಲಿ ಚಿರತೆ ಕೊಂದು ಹಾಕಿದ 2 ಹಸು ಹಾಗೂ ನಾಯಿಯನ್ನು ಇರಿಸಲಾಗಿದೆ. ನುರಿತ ಪರಿಣಿತರು ಹಾಗೂ ಸಿಬ್ಬಂದಿ ನಿಗಾ ವಹಿಸಿದ್ದು, ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಮೂರನೇ ದಾಳಿ: ಕಗ್ಗಲಿಗುಂದಿಯಲ್ಲಿ ಬಾಲಕಿ ಸಾವಿಗೆ ಕಾರಣವಾದ ಚಿರತೆ ಜೂ.27ರ ರಾತ್ರಿ ಗುಂಡಾಲ್ ಡ್ಯಾಂ ಸಮೀಪದ ಜಮೀನಿನ ಗುಡಿಸಲಿನಲ್ಲಿ ಕಾವಲು ಕಾಯುತ್ತಿದ್ದ ಕಂಚಗಳ್ಳಿ ಗ್ರಾಮದ ನಂಜಪ್ಪ ಎಂಬುವರ ಮೇಲೆಯೂ ದಾಳಿ ನಡೆಸಿ ಗಾಯಗೊಳಿಸಿದ್ದು, ಈ ಭಾಗದಲ್ಲೇ ಸಂಚರಿಸುತ್ತಿತ್ತು ಎನ್ನಲಾಗಿದೆ. ಹಾಗಾಗಿ ಇದೀಗ ಕಾಮಗೆರೆಯ ಜಮೀನಿನಲ್ಲಿ ಹಸುಗಳನ್ನು ಕೊಂದು ಹಾಕಿರುವುದು ಬಾಲಕಿ ಸಾವಿಗೆ ಕಾರಣವಾದ ಚಿರತೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಚಿರತೆಯ ಈ ದಾಳಿ 3 ನೇಯದಾಗಿದೆ.
ಜೀವಭಯದಲ್ಲಿ ಜನತೆ: ಸಿದ್ಧೇಶ್ವರ ಬೆಟ್ಟ ಸಮೀಪದಲ್ಲಿ ಜು.16 ರಂದು ಸೆರೆಯಾದ ಚಿರತೆ ಬಾಲಕಿಯ ಸಾವಿಗೆ ಕಾರಣವಾಗಿದ್ದ ಚಿರತೆಯೇ ಎಂಬುದನ್ನು ಅರಣ್ಯ ಇಲಾಖೆ ದೃಢಪಡಿಸಿರಲಿಲ್ಲ. ಇದರಿಂದ ಈ ಭಾಗದ ಜನರು ಸೆರೆಯಾದ ಚಿರತೆಯನ್ನು ಸಾವಿಗೆ ಕಾರಣವಾಗಿದ್ದ ಚಿರತೆ ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದರು. ಆದರೆ ಚಿರತೆ ದಾಳಿ ಮರುಕಳುಹಿಸಿದೆ. ಇದರಿಂದ ಜನರು ಜೀವ ಭಯದಲ್ಲಿದ್ದಾರೆ.
ಅರಣ್ಯ ಇಲಾಖೆ ನಿರ್ಲಕ್ಷ್ಯ: ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಬೋನು ಇರಿಸಿದೆ. ಈ ಚಿರತೆ ಕಳೆದ 22 ದಿನಗಳಿಂದಲೂ ಬೋನಿಗೆ ಬೀಳುತ್ತಿಲ್ಲ. ಆಗ್ಗಿದ್ದಾಂಗೆ ದಾಳಿ ನಡೆಸುತ್ತಲೇ ಇದ್ದು, ಪ್ರಾಣಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಜನತೆ ಕಾರ್ಯಾಚರಣೆಯ ವೇಗವನ್ನು ಹೆಚ್ಚಿಸಿ ಚಿರತೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.