

ಚಾಮರಾಜನಗರ: ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ದಾಳಿ ತಪ್ಪಿಸಲು ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಜನರ ಜೀವಗಳಿಗೆ "ಗ್ಯಾರಂಟಿ" ಸಿಗುತ್ತಿಲ್ಲ. ಕತ್ತಲಿನ ಕಾರಣಕ್ಕೆ ದಾಳಿ ಮಾಡೋ ಕಾಡು ಪ್ರಾಣಿ ಯಾವುದು ಎಂದು ತಿಳಿದುಕೊಳ್ಳೋಕೂ ಆಗುತ್ತಿಲ್ಲ.
ಹನೂರು ತಾಲೂಕಿನ, ಬಿಆರ್ ಟಿ ಅರಣ್ಯ ಸಮೀಪದ ಕಗ್ಗಲಿಗುಂಡಿ ಗ್ರಾಮದಲ್ಲಿ ನಡೆದಿರುವ ಅವಘಡ ಇದಕ್ಕೆ ಸಾಕ್ಷಿ. ಸೋಮವಾರ ರಾತ್ರಿ ರಾಮು ಮತ್ತು ಲಲಿತ ಮನೆ ಮುಂದೆ ಕುಳಿತಿದ್ದರು. ಇಲ್ಲೇ ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕೂತಿದ್ದ ಮಗಳು ಸುಶೀಲಾ(6) ಮೇಲೆ ಕಾಡು ಪ್ರಾಣಿಯೊಂದು ದಾಳಿ ಮಾಡಿದೆ. ಕತ್ತಲಿದ್ದ ಕಾರಣ ದಾಳಿ ಮಾಡಿದ್ದು ಹುಲಿಯೋ ಅಥವಾ ಚಿರತೆಯೋ ಎನ್ನುವುದು ಗೊತ್ತಾಗಿಲ್ಲ. ಮಗು ಮೇಲೆ ಪ್ರಾಣಿ ಎರಗಿದ್ದನ್ನು ಗಾಬರಿಯಿಂದ ಕಂಡ ಅಪ್ಪ-ಅಮ್ಮ ಚೀರಾಡಿದ್ದಾರೆ. ಸದ್ದು ಕೇಳಿ ನೆರೆಹೊರೆವರು ಓಡಿ ಬಂದಿದ್ದಾರೆ.
ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿದ ಕಾಡು ಪ್ರಾಣಿ ಕಂದಕದ ಬಳಿ ಜಿಗಿದಿದೆ. ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ. ಪ್ರಾಣ ಉಳಿದುಕೊಂಡಿದೆ. ಕಾಡು ಪ್ರಾಣಿ ಸ್ಥಳದಿಂದ ಪರಾರಿಯಾಗಿದೆ. ತಕ್ಷಣ ಬಾಲಕಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ.
ದವಡೆ ಮೂಳೆ ಮುರಿದಿದೆ..
ನನ್ನ ಮಗಳ ಮೇಲೆ ಹುಲಿ, ಚಿರತೆ ಗಾತ್ರದ ಪ್ರಾಣಿಯೊಂದು ದಾಳಿ ಮಾಡಿತು. ಅದು ಯಾವ ಪ್ರಾಣಿ ಅನ್ನೋದು ಗಾಬರಿಯಲ್ಲಿ ಗೊತ್ತಾಗಲಿಲ್ಲ. ಮಗುವಿನ ಕತ್ತಿಗೆಗೆ ಬಾಯಿ ಹಾಕಿರೋದರಿಂದ ದವಡೆ ಮುರಿದಿದೆ. ಕತ್ತಿನ ಕೆಳಗೆ ಗಾಯಗಳಾಗಿವೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ ಎಂದು ಬಾಲಕಿ ಸುಶೀಲಾ ತಂದೆ ರಾಮು ವಿಜಯವಾಣಿ ಗೆ ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಭಯದ ಜತೆ ಗೊಂದಲ:
ದಾಳಿ ಮಾಡಿದ ಪ್ರಾಣಿ ಹುಲಿಯೋ ಅಥವಾ ಚಿರತೆಯೋ ಅನ್ನು ಗೊಂದಲದಲ್ಲಿ ಗ್ರಾಮಸ್ಥರಿದ್ದಾರೆ. ಕೆಲವರು ಚಿರತೆ ಎಂದರೆ, ಮತ್ತೆ ಕೆಲವರು ಹುಲಿ ಎಂದು ವಾದ ಮಾಡುತ್ತಿದ್ದಾರೆ. ವನ್ಯಪ್ರಾಣಿ ದಾಳಿ ಇಡೀ ಗ್ರಾಮಸ್ಥರಲ್ಲಿ ತಲ್ಲಣ ಸೃಷ್ಟಿಸಿದೆ. ಜಮೀನುಗಳಿಗೆ ಹೋಗುವುದಿರಲಿ ಮನೆ ಮುಂದೆ ಕೂರುವುದಕ್ಕೂ ಹೆದರುತ್ತಿದ್ದಾರೆ. ಈ ಕುರಿತು ಪತ್ರಿಕಾ ಪ್ರಟಕಣೆ ಹೊರಟಿಸಿರುವ ಅರಣ್ಯ ಇಲಾಖೆ ದಾಳಿ ಮಾಡಿದ್ದು ಚಿರತೆ ಎಂದು ಸ್ಪಷ್ಟ ಪಡಿಸಿದೆ. ಮಕ್ಕಳನ್ನು ಒಂಟಿಯಾಗಿ ಆಟವಾಡಲು ಬಿಡಬೇಡಿ, ಜಮೀನುಗಳಿಗೆ ಒಬ್ಬರೇ ಹೋಗಬೇಡಿ, ಚಿರತೆ ಕಂಡಲ್ಲಿ ಅರಣ್ಯ ಇಲಾಖೆಗೆ ತಿಳಿಸಿ, ಕಾರ್ಯಾಚರಣೆ ವೇಳೆ ಗುಂಪಗೂಡಬೇಡಿ ಎಂದು ಕೋರಿದೆ.