

ಹನೂರು : ಸಮೀಪದ ಬೂದುಬಾಳು ಗ್ರಾಮದಲ್ಲಿ ನಡೆಯುತ್ತಿರುವ ಗುಡಿಹಟ್ಟಿ ಜಾತ್ರಾ ಮಹೋತ್ಸವದಲ್ಲಿ ಶನಿವಾರ ರಾತ್ರಿ ಸ್ವಾಮಿಯ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಉತ್ಸವದ ಹಿನ್ನಲೆಯಲ್ಲಿ ರಾತ್ರಿ ದೇಗುಲದಲ್ಲಿ ವೆಂಕಟರಮಣ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗದಲ್ಲಿ ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಸಿಂಗರಿಸಲಾಗಿದ್ದ ಪಲ್ಲಕ್ಕಿಯಲ್ಲಿ ವೆಂಕರಮಣಸ್ವಾಮಿ ವಿಗ್ರಹಮೂರ್ತಿಯನ್ನು ಕೂರಿಸಲಾಯಿತು. ದೇಗುಲದ ಧರ್ಮಾಧಿಕಾರಿ, ಅರ್ಚಕರು, ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ರಾತ್ರಿ 9ಕ್ಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆ, ಪ್ರಾಥಮಿಕ ಶಾಲೆ, ಕೆರೆ ಏರಿಯ ಮೂಲಕ ಗ್ರಾಮದ ಹೊರವಲಯದಲ್ಲಿರುವ ದೇವರಗುಡಿಯ ಮಂಟಪದವರೆಗೆ ಉತ್ಸವದ ಮೆರವಣಿಗೆಯನ್ನು ನಡೆಸಲಾಯಿತು. ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಿ ದೇಗುಲಕ್ಕೆ ಮತ್ತೆ ಕರೆ ತರಲಾಯಿತು.
ಪಟಾಕಿ ಸಿಡಿಸಿ ಸಂಭ್ರಮ: ಉತ್ಸವದಲ್ಲಿ ದಾರಿಯುದ್ದಕ್ಕೂ ಯುವಕರು ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿದರಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಭಕ್ತರು ಗೋವಿಂದ ಗೋವಿಂದಾ.... ಎಂಬ ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಭಕ್ತಿ -ಭಾವ ಮೆರೆದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ ತನಕ ಮಂಡ್ಯದ ಸಚಿನ್ ತಂಡದವರಿಂದ ಹರಿಕಥೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.